ಮಂಗಳೂರು: ತಾಲೂಕಿನ ಗಂಜಿಮಠ ಸಮೀಪದ ಇತಿಹಾಸ ಪ್ರಸಿದ್ಧ ಮಳಲಿ(ಮಣೇಲ್) ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪುನರ್ ನಿರ್ಮಾಣದ ಅಂಗವಾಗಿ, ಕ್ಷೇತ್ರದ ನಾಗಾಲಯದಲ್ಲಿ ವಿವಿಧ ದೈವಗಳ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ಮಾರ್ಗದರ್ಶನದಲ್ಲಿ ಶನಿವಾರ ಮತ್ತು ಭಾನುವಾರ ಈ ಪವಿತ್ರ ಧಾರ್ಮಿಕ ವಿಧಿವಿಧಾನಗಳು ಜರುಗಿದವು.













ಮೇ 9ರ ಶನಿವಾರ ಸಂಜೆ ವಾಸ್ತು ಪೂಜೆಯೊಂದಿಗೆ ಕಾರ್ಯಕ್ರಮಗಳು ಆರಂಭವಾದವು. ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ರಾಕೋಘ್ನ ಹೋಮ, ವಾಸ್ತು ಹೋಮ, ದಿಶಾ ಬಲಿ ಹಾಗೂ ಬಿಂಬಾಧಿವಾಸ ಸೇರಿದಂತೆ ವಿವಿಧ ವೈದಿಕ ವಿಧಿಗಳು ನಡೆದವು. ಭಾನುವಾರ ಬೆಳಿಗ್ಗೆ 6:30ರಿಂದ ಪುಣ್ಯಾಹ, ಗಣಪತಿ ಹೋಮ, ಸನ್ನಿಧಿಗಳ ಪ್ರತಿಷ್ಠಾಪನಾ ಹೋಮ, ಕಲಶ ಪೂಜೆ, ಆದಿವಾಸ ಹೋಮ, ಪವಮಾನ ಹೋಮ, ತಿಲ ಹೋಮ ಹಾಗೂ ಆಶ್ಲೇಷ ಬಲಿ ಪೂಜೆಗಳು ಸಂಪನ್ನಗೊಂಡವು.
ಶುಭ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ:
ಭಾನುವಾರ ಬೆಳಿಗ್ಗೆ 9:43ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಕ್ಷೇತ್ರದ ನಾಗಾಲಯದಲ್ಲಿ ಶ್ರೀ ನಾಗಬ್ರಹ್ಮ, ರಕ್ತೇಶ್ವರಿ, ನಂದಿಗೋಣ ಹಾಗೂ ಕ್ಷೇತ್ರಪಾಲ ಸನ್ನಿಧಿಗಳ ಪುನಃ ಪ್ರತಿಷ್ಠಾಪನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಬ್ರಹ್ಮಕಲಶಾಭಿಷೇಕಗಳು ಅತ್ಯಂತ ವೈಭವದಿಂದ ನೆರವೇರಿದವು. ಮಧ್ಯಾಹ್ನ ಮಹಾಪೂಜೆ ಜರುಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಈ ಪವಿತ್ರ ಧಾರ್ಮಿಕ ಸಮಾರಂಭದಲ್ಲಿ ಪ್ರಮುಖರಾದ ಪ್ರಶಾಂತ್ ಕುಮಾರ್ ಜೈನ್ ಕಟ್ಟಿಮಾರ್, ಕಾರ್ಯಾಧ್ಯಕ್ಷ ಭಾಸ್ಕರ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಖರ ಜೋಗಿ ಮಟ್ಟಿ, ಟ್ರಸ್ಟ್ ಅಧ್ಯಕ್ಷ ಭಾಸ್ಕರ ಕುಲಾಲ್, ಪ್ರೇಮಚಂದ್ರ ನಾಯಕ್, ಶಿವರಾಜ್, ಇವರೊಂದಿಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬಾಬು ಪೂಜಾರಿ, ಜಯಾನಂದ ನಾಯ್ಕ್ ಮೋಗರು ಸೇರಿದಂತೆ ಸಮಿತಿಯ ಸದಸ್ಯರು ಮತ್ತು ಊರಿನ ಸಮಸ್ತ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.