ಕೊನೆಗೂ ವಿಜಯ್ ಪಾಳಯಕ್ಕೆ ಸಿಕ್ಕಿತು ಮ್ಯಾಜಿಕ್ ನಂಬರ್: ಕೈಕೊಟ್ಟ ʻದ್ರಾವಿಡ ಮೈತ್ರಿ’ ಲೆಕ್ಕಾಚಾರ!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ಉಂಟಾಗಿದ್ದ ಸರ್ಕಾರ ರಚನೆಯ ಅನಿಶ್ಚಿತತೆಗೆ ಅಂತಿಮವಾಗಿ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK), ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 118 ರ ಗಡಿಯನ್ನು ಯಶಸ್ವಿಯಾಗಿ ದಾಟಿದೆ. ಈ ಮೂಲಕ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಯ ಅಬ್ಬರಕ್ಕೆ ಬ್ರೇಕ್ ಬಿದ್ದಂತಾಗಿದೆ.

ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆಗೆ ಸರ್ಕಾರ ರಚಿಸಲು 10 ಸ್ಥಾನಗಳ ಕೊರತೆಯಿತ್ತು. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ 5 ಶಾಸಕರು, ವಿಸಿಕೆ (VCK) ಪಕ್ಷದ 2 ಹಾಗೂ ಎಡಪಕ್ಷಗಳ (CPI ಮತ್ತು CPM) ತಲಾ ಇಬ್ಬರು ಶಾಸಕರು ವಿಜಯ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇದರೊಂದಿಗೆ ವಿಜಯ್ ಪಾಳಯದ ಒಟ್ಟು ಸಂಖ್ಯಾಬಲ 119 ಕ್ಕೆ ಏರಿಕೆಯಾಗಿದ್ದು, ಬಹುಮತದ ಗುರಿ ತಲುಪುವಲ್ಲಿ ವಿಜಯ್ ಯಶಸ್ವಿಯಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಸಂಖ್ಯಾಬಲದ ಕೊರತೆಯ ಕಾರಣ ನೀಡಿ ವಿಜಯ್ ಅವರ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯಪಾಲ ಆರ್.ವಿ. ಅರ್ಲೇಕರ್, ಇಂದು ಸಂಜೆ 4:30ಕ್ಕೆ ವಿಜಯ್ ಅವರಿಗೆ ಭೇಟಿಗೆ ಅವಕಾಶ ನೀಡಿದ್ದಾರೆ. ಈ ಮೂರನೇ ಭೇಟಿಯಲ್ಲಿ ವಿಜಯ್ ಅವರು ಮಿತ್ರಪಕ್ಷಗಳ ಬೆಂಬಲ ಪತ್ರದೊಂದಿಗೆ ಅಧಿಕೃತವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಗುರುವಾರ ರಾಜ್ಯಪಾಲರು ಕೇಳಿದ್ದ ಕಠಿಣ ಪ್ರಶ್ನೆಗಳಿಗೆ ಇಂದು ವಿಜಯ್ ಸಂಖ್ಯಾಬಲದ ಮೂಲಕವೇ ಉತ್ತರ ನೀಡಲು ಸಜ್ಜಾಗಿದ್ದಾರೆ.

ಜೋಸೆಫ್‌ ವಿಜಯ್ ಅವರಿಗೆ ಮ್ಯಾಜಿಕ್ ನಂಬರ್ ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಶೀಘ್ರದಲ್ಲೇ ಪ್ರಮಾಣವಚನ ಸ್ವೀಕಾರದ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ.

error: Content is protected !!