ರಾಯಲ್ ಗಝಿಬೋದಿಂದ ಸಾರ್ವಜನಿಕ ಜಾಗಕ್ಕೆ ಬ್ಯಾರಿಕೇಡ್ ಬೇಲಿ! ಪಾರ್ಕಿಂಗ್ ಕಿತ್ತುಕೊಂಡ ಮಾಲೀಕನ ವಿರುದ್ಧ ಆಕ್ರೋಶ!

ಮಂಗಳೂರು: ನಗರದ ಶರವು ಮಹಾಗಣಪತಿ ದೇವಸ್ಥಾನದಂತಹ ಪವಿತ್ರ ಮತ್ತು ಜನನಿಬಿಡ ಪ್ರದೇಶದಲ್ಲಿ ಖಾಸಗಿ ರೆಸ್ಟೋರೆಂಟ್ ಮಾಲೀಕನೊಬ್ಬ ಸಾರ್ವಜನಿಕ ರಸ್ತೆಯನ್ನೇ ತನ್ನ ಪಿತ್ರಾರ್ಜಿತ ಆಸ್ತಿಯಂತೆ ಬಳಸಿಕೊಳ್ಳುತ್ತಿರುವುದಾಗಿ ಸಾರ್ವಜನಿಕರಿಂದ ಗಂಭೀರ ಆರೋಪವೊಂದು ಕೇಳಿಬಂದಿದೆ. ಇಲ್ಲಿನ ʻರಾಯಲ್ ಗಝಿಬೋ’ ರೆಸ್ಟೋರೆಂಟ್ ಎದುರು ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕರ ವಾಹನ ನಿಲುಗಡೆಗೆ ಅಡ್ಡಿಪಡಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಲು ಬರುವ ಸಾರ್ವಜನಿಕರನ್ನು ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಮಾಲೀಕರು ಅಡ್ಡಗಟ್ಟುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಇದು ನಮ್ಮ ಜಾಗ, ನಾವು ಇದನ್ನು ಪಡೆದುಕೊಂಡಿದ್ದೇವೆ. ಇಲ್ಲಿ ನಮ್ಮ ರೆಸ್ಟೋರೆಂಟ್‌ಗೆ ಬರುವವರಿಗೆ ಮಾತ್ರ ಪಾರ್ಕಿಂಗ್‌ಗೆ ಅವಕಾಶ” ಎಂದು ಧಮಕಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಖಾಸಗಿ ಪಾರ್ಕಿಂಗ್ ವಲಯವನ್ನಾಗಿ ಮಾರ್ಪಡಿಸಲು ಇವರಿಗೆ ಅಧಿಕಾರ ನೀಡಿದವರು ಯಾರು ಎಂಬ ಪ್ರಶ್ನೆ ಈಗ ದಟ್ಟವಾಗಿ ಎದ್ದಿದೆ.

ನಗರದ ರಸ್ತೆಗಳು ಮಂಗಳೂರು ಮಹಾನಗರ ಪಾಲಿಕೆಗೆ ಸೇರಿವೆ. ಆದರೆ, ರಾಯಲ್ ಗಝಿಬೋ ರೆಸ್ಟೋರೆಂಟ್‌ನವರು ರಸ್ತೆಯನ್ನೇ ʻಖರೀದಿಸಿದ’ ರೀತಿಯಲ್ಲಿ ವರ್ತಿಸುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ವಾಣಿಜ್ಯ ಸಂಕೀರ್ಣಗಳು ತಮ್ಮ ಕಟ್ಟಡದ ಒಳಗಡೆಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ನಿಯಮವಿದ್ದರೂ, ರಸ್ತೆಯನ್ನು ಅತಿಕ್ರಮಿಸಿಕೊಳ್ಳುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಶರವು ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಪಾರ್ಕಿಂಗ್ ಸಮಸ್ಯೆ ಇರುವ ಈ ಭಾಗದಲ್ಲಿ, ಸಾರ್ವಜನಿಕ ಜಾಗವನ್ನು ಹೀಗೆ ಖಾಸಗಿ ಹೋಟೆಲ್ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಭಕ್ತರ ಮತ್ತು ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿದೆ. ಹೋಟೆಲ್‌ಗೆ ಬರುವ ಗಿರಾಕಿಗಳು ಮಾತ್ರ ವಿಐಪಿಗಳೇ? ದಾರಿಯಲ್ಲಿ ಹೋಗುವ ಸಾಮಾನ್ಯ ಜನರಿಗೆ ರಸ್ತೆಯಲ್ಲಿ ಹಕ್ಕಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸಾರ್ವಜನಿಕ ರಸ್ತೆಯನ್ನು ಖಾಸಗಿಯಾಗಿ ಬಳಸಿಕೊಳ್ಳಲು ಮಂಗಳೂರು ನಗರ ಪಾಲಿಕೆ (MCC) ಅನುಮತಿ ನೀಡಿದೆಯೇ? ರಸ್ತೆಯಲ್ಲಿ ಬ್ಯಾರಿಕೇಡ್ ಇಟ್ಟು ಜನರನ್ನು ತಡೆಯಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿರುವ ಸಾರ್ವಜನಿರು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಪ್ರಕಾರ, ಯಾವುದೇ ವಾಣಿಜ್ಯ ಮಳಿಗೆಗಳು ತಮ್ಮ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ತಮ್ಮ ಕಟ್ಟಡದ ಒಳಗೆ (Basement/Setback) ಕಲ್ಪಿಸಬೇಕು. ರಸ್ತೆಯನ್ನು ಆಕ್ರಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಅಭಿಪ್ರಾಯಿಸಿದ್ದಾರೆ.

ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯು ಇಂತಹ ಅಕ್ರಮ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತ್ತು. ಆದರೆ, ಅಧಿಕಾರಿಗಳು ಹೋದ ನಂತರ ಮತ್ತೆ ಹಳೇ ಚಾಳಿ ಮುಂದುವರಿಯುತ್ತಿದೆ. “ನೋ ಪಾರ್ಕಿಂಗ್” ಬೋರ್ಡ್ ಅಳವಡಿಸಲು ಸಂಚಾರ ಪೊಲೀಸರಿಗೆ ಮಾತ್ರ ಅಧಿಕಾರವಿದ್ದು, ಹೋಟೆಲ್ ಮಾಲೀಕರು ತಾವೇ ಬೋರ್ಡ್ ಅಥವಾ ಬ್ಯಾರಿಕೇಡ್ ಹಾಕುವುದು ಕಾನೂನುಬಾಹಿರ ಎಂಬ ಆರೋಪಿಸಿದ್ದಾರೆ.

ಸಂಚಾರ ಪೊಲೀಸರು ಸಣ್ಣಪುಟ್ಟ ವಾಹನ ಸವಾರರಿಗೆ ದಂಡ ಹಾಕುವಲ್ಲಿ ತೋರಿಸುವ ಉತ್ಸಾಹವನ್ನು, ಇಂತಹ ರಸ್ತೆ ಅತಿಕ್ರಮಣ ಮಾಡುವ ಮಂದಿಯ ವಿರುದ್ಧ ಏಕೆ ತೋರಿಸುತ್ತಿಲ್ಲ? ನಗರ ಪಾಲಿಕೆ ಮತ್ತು ಸಂಚಾರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಅಕ್ರಮವಾಗಿ ಹಾಕಲಾಗಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರೇ ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

error: Content is protected !!