
ಚಿಕ್ಕಮಗಳೂರು: ಮಧ್ಯಪ್ರದೇಶದ ಭೋಪಾಲ್ ಮೂಲದ ಗೋನು ಮತ್ತು ಸೋನಾ ದಂಪತಿಗಳ 1.5 ವರ್ಷದ ಮಗು ಕಾಣೆಯಾಗಿದ್ದ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆಳಗೂರು ಎಸ್ಟೇಟ್ ನಲ್ಲಿ ನಡೆದಿತ್ತು.

ಶಿವಂ ಕಾಣೆಯಾಗಿದ್ದ ಮಗು.
ಮೂರು ದಿನಗಳ ಹಿಂದೆ ಕೆಲಸದ ನಿಮಿತ್ತ ಎಸ್ಟೇಟ್‌ಗೆ ಬಂದಿದ್ದ ಈ ದಂಪತಿಗಳ ಪುತ್ರ ಶಿವಂ ಮೇ 6ರಂದು ಸಂಜೆ 5 ಗಂಟೆ ಸುಮಾರಿಗೆ ಮನೆಯ ಬಳಿ ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ. ಈ ಕುರಿತು ಪೋಷಕರು ಬಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಬಾಳೂರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್ ನೇತೃತ್ವದಲ್ಲಿ ವಿಶೇಷ ಶೋಧ ಕಾರ್ಯಾಚರಣೆ ಆರಂಭಿಸಿದರು. ಸ್ಥಳೀಯ ನಿವಾಸಿಗಳು ಮತ್ತು ಎಸ್ಟೇಟ್ ಕಾರ್ಮಿಕರ ಸಹಕಾರದೊಂದಿಗೆ ತಪಾಸಣೆ ನಡೆಸಲಾಯಿತು. ಸುಮಾರು 12 ಗಂಟೆಗಳ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಕಾಣೆಯಾಗಿದ್ದ ಬಾಲಕ ಶಿವಂನನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದರು.

ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.