ಜನಾದೇಶಕ್ಕೆ ದ್ರೋಹ? ವಿಜಯ್ ಅಲೆ ತಡೆಯಲು ಒಂದಾದ ಡಿಎಂಕೆ-ಎಐಎಡಿಎಂಕೆ! ರಾಜೀನಾಮೆ ಬಾಂಬ್ ಸಿಡಿಸಿದ ಟಿವಿಕೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಹಾಗೂ ‘ಅನೈತಿಕ’ ಎಂಬ ಟೀಕೆಗೆ ಗುರಿಯಾಗಿರುವ ಬೆಳವಣಿಗೆಯೊಂದು ನಡೆದಿದೆ. ದಶಕಗಳ ಕಾಲ ಪರಸ್ಪರ ಬದ್ಧ ವೈರಿಗಳಾಗಿದ್ದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳು, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಕೈಜೋಡಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಈ ಅಪವಿತ್ರ ಮೈತ್ರಿಯ ವಿರುದ್ಧ ಗುಡುಗಿರುವ ವಿಜಯ್ ಅವರ ಟಿವಿಕೆ ಪಕ್ಷ, “ಇದು ಜನಾಭಿಪ್ರಾಯಕ್ಕೆ ಮಾಡಿದ ಅಪಚಾರ” ಎಂದು ಕಿಡಿಕಾರಿದೆ. ಒಂದು ವೇಳೆ ಡಿಎಂಕೆ-ಎಐಎಡಿಎಂಕೆ ಮೈತ್ರಿ ಸರ್ಕಾರ ರಚಿಸಲು ಮುಂದಾದರೆ, ಟಿವಿಕೆಯ ಎಲ್ಲಾ 107 ಶಾಸಕರು ಒಟ್ಟಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದು ರಾಜ್ಯವನ್ನು ಮತ್ತೊಂದು ಚುನಾವಣೆಯತ್ತ ದೂಡುವ ಸಾಧ್ಯತೆಯಿದೆ.

ಅಸ್ತಿತ್ವಕ್ಕಾಗಿ ‘ಅಪವಿತ್ರ’ ಮೈತ್ರಿ?
ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ಅವರ ಟಿವಿಕೆಯನ್ನು ಅಧಿಕಾರದಿಂದ ದೂರ ಇಡಲು ಈ ಎರಡು ದ್ರಾವಿಡ ಪಕ್ಷಗಳು ಒಂದಾಗಿವೆ. “ಬಿಜೆಪಿಯನ್ನು ತೊರೆದರೆ ಮಾತ್ರ ಬೆಂಬಲ” ಎಂಬ ಷರತ್ತನ್ನು ಡಿಎಂಕೆ ವಿಧಿಸಿದ್ದು, ಅದಕ್ಕೆ ಎಐಎಡಿಎಂಕೆ ಸಮ್ಮತಿಸಿದೆ ಎನ್ನಲಾಗಿದೆ. ಈ ಬೆಳವಣಿಗೆಯನ್ನು ‘ಅವಕಾಶವಾದಿ ರಾಜಕಾರಣ’ ಎಂದು ವಿಶ್ಲೇಷಿಸಲಾಗುತ್ತಿದ್ದು, ಇಷ್ಟು ದಿನ ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದವರು ಈಗ ಅಧಿಕಾರ ಹಂಚಿಕೊಳ್ಳಲು ಮುಂದಾಗಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.

ನಟ ವಿಜಯ್ ಅವರ ಜನಪ್ರಿಯತೆ ಮತ್ತು ಅವರಿಗೆ ಸಿಕ್ಕಿರುವ ಶೇ. 35ರಷ್ಟು ಮತಗಳು ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರ ನಿದ್ದೆಗೆಡಿಸಿವೆ. ವಿಜಯ್ ಒಮ್ಮೆ ಸಿಎಂ ಪೀಠ ಏರಿದರೆ ಮುಂದೆ ರಾಜ್ಯದಲ್ಲಿ ದ್ರಾವಿಡ ಪಕ್ಷಗಳ ಅಧಿಪತ್ಯ ಕೊನೆಯಾಗಬಹುದು ಎಂಬ ಭಯದಿಂದ ಈ ಎರಡು ಪಕ್ಷಗಳು ‘ಅನೈತಿಕ’ ಒಪ್ಪಂದಕ್ಕೆ ಮುಂದಾಗಿವೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಮತದಾರರ ವಿಶ್ವಾಸಕ್ಕೆ ದ್ರೋಹ?
ಒಂದು ಕಾಲದಲ್ಲಿ ಎಂ.ಜಿ.ಆರ್ ಮತ್ತು ಕರುಣಾನಿಧಿ ಅವರ ಸಿದ್ಧಾಂತಗಳ ಮೇಲೆ ಹೋರಾಡುತ್ತಿದ್ದ ಈ ಪಕ್ಷಗಳು, ಇಂದು ಕೇವಲ ಅಧಿಕಾರ ಉಳಿಸಿಕೊಳ್ಳಲು ಒಂದಾಗಿರುವುದು ಸಿದ್ಧಾಂತಗಳ ಪತನವನ್ನು ಸೂಚಿಸುತ್ತಿದೆ. ಈ ಮೈತ್ರಿಯು ಕೇವಲ ರಾಜಕೀಯ ಲೆಕ್ಕಾಚಾರವಾಗಿದೆಯೇ ಹೊರತು ಜನಹಿತಕ್ಕಾಗಿ ಅಲ್ಲ ಎನ್ನುವುದು ಸಾರ್ವಜನಿಕರ ಪ್ರಬಲ ವಾದವಾಗಿದೆ. ಮೇ 10ರ ಗಡುವು ಮುಗಿಯುವ ಮುನ್ನ ತಮಿಳುನಾಡು ರಾಜಕೀಯ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

error: Content is protected !!