ಕುಡ್ಲದ ಮದ್ಯಪ್ರಿಯರೇ ಹುಷಾರು! ನಿಮ್ಮ ಫೇವರೆಟ್ ಬ್ರಾಂಡ್ ಈಗ ಸಿಗೋದು ಡೌಟು! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಮಂಗಳೂರು : ಮಂಗಳೂರಿನ ಬಿಸಿಲಿಗೆ ಸಮುದ್ರದ ನೀರೇ ಆವಿಯಾಗುವಂತಿದ್ದರೆ, ಇತ್ತ ಬಾರ್‌ಗಳಲ್ಲಿ ವಿಸ್ಕಿ ಬಾಟಲಿಗಳು ಕೂಡ ನಾಪತ್ತೆ ಆಗುತ್ತಿವೆ! ಹೌದು, ಕುಡ್ಲದ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಈಗ “ನೋ ಸ್ಟಾಕ್” ಮದ್ಯಪ್ರಿಯರ ಬಿಪಿ ಏರಿಸುತ್ತಿವೆ. ಕೌಂಟರ್ ಹತ್ತಿರ ಹೋಗಿ “ಒಂದು ವಿಸ್ಕಿ ಕೊಡಿ” ಅಂದರೆ, ಸಪ್ಲೈಯರ್ ಸಾಹೇಬರು “ಬ್ರ್ಯಾಂಡ್ ಇಲ್ಲ ಮಾರ್ರೆ..” ಎಂದು ಕೈತೋರಿಸುತ್ತಿದ್ದಾರೆ.

ಮಂಗಳೂರಿನ ಘಾಟಿ ಬಿಸಿಲಿಗೆ ಮದ್ಯಪ್ರಿಯರು ತಣ್ಣಗಾಗಲು ಬೀಯರ್ ಮೊರೆ ಹೋಗುತ್ತಿದ್ದಾರೆ. ಆದರೆ ಅಲ್ಲಿಯೂ ಸಂಕಷ್ಟ ತಪ್ಪಿಲ್ಲ! ವಿಸ್ಕಿ ಸ್ಟಾಕ್ ಸಿಗದೆ ಇರುವುದರಿಂದ ಎಲ್ಲರೂ ಬೀಯರ್ ಮೇಲೆ ಬಿದ್ದಿದ್ದಾರೆ. ಪರಿಣಾಮವೇನಪ್ಪಾ ಅಂದರೆ, ಬಾರ್‌ಗಳಲ್ಲಿ ಬೀಯರ್ ಬಾಟಲಿಗಳು ಕೂಡ ಫ್ರಿಜ್‌ನಿಂದ ಹೊರಬರುವ ಮೊದಲೇ ಖಾಲಿಯಾಗುತ್ತಿವೆ. “ಸ್ವಲ್ಪ ತಣ್ಣಗಿರಲಿ” ಅಂದರೆ, “ಬಾಟಲಿ ಫ್ರಿಜ್ ಒಳಗೆ ಹೋಗುವುದೇ ತಡ, ಗಿರಾಕಿಗಳು ಎತ್ತಿಕೊಂಡು ಹೋಗುತ್ತಾರೆ” ಎಂದು ಬಾರ್ ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ, ರಾಜ್ಯ ಸರ್ಕಾರವು ಮೇ ತಿಂಗಳಿನಿಂದ ಮದ್ಯದ ಬೆಲೆ ಏರಿಸುವ ಸುಳಿವು ನೀಡಿದ್ದೇ ತಡ, ಕೆಲವರು ಬೆಲೆ ಏರಿಕೆಯ ನಂತರ ಲಾಭ ಮಾಡಿಕೊಳ್ಳಲು ಸ್ಟಾಕ್ ಅನ್ನು ಬಚ್ಚಿಟ್ಟಿದ್ದಾರೆಯೇ ಎಂಬ ಅನುಮಾನ ಕುಡುಕ ಸಂಘದ ಸದಸ್ಯರನ್ನು ಕಾಡುತ್ತಿದೆ. “ಬೆಲೆ ಏರೋ ಮುಂಚೆ ನಾಲ್ಕು ಪೆಗ್ ಹಾಕೋಣ ಅಂದ್ರೆ, ಇಲ್ಲಿ ಬ್ರ್ಯಾಂಡ್‌ಗಳೇ ಸಿಕ್ತಿಲ್ಲ! ಇದು ನಮ್ಮ ಹೊಟ್ಟೆ ಮೇಲೆ ಹೊಡೆಯುವ ಪ್ಲಾನ್” ಎಂದು ಕಾವೂರಿನ ಪಂಜಿಮೊಗರಿನ ಬಳಿಯ ಬಾರ್‌ವೊಂದರಲ್ಲಿ ಕುಳಿತಿದ್ದ ಗ್ರಾಹಕರೊಬ್ಬರು ಹಾಸ್ಯದ ಧಾಟಿಯಲ್ಲಿ ಆಕ್ರೋಶ ಹೊರಹಾಕಿದರು.

ಸರ್ಕಾರವು ಈಗ ʻಆಲ್ಕೋಹಾಲ್ ಬೈ ವಾಲ್ಯೂಮ್’ (ABV) ಅನ್ನೋ ಹೊಸ ಮ್ಯಾಜಿಕ್ ಮಾಡ್ತಿದೆ ಅಂತೆ. ಇದರ ಪ್ರಕಾರ ಯಾವ ಮದ್ಯದಲ್ಲಿ ಜಾಸ್ತಿ ಕಿಕ್ ಇರುತ್ತೋ ಅದಕ್ಕೆ ಜಾಸ್ತಿ ರೇಟು! ಅಂದರೆ, ಮುಂದಿನ ದಿನಗಳಲ್ಲಿ ಕ್ವಾರ್ಟರ್ ಬಾಟಲಿ ಮೇಲೆ ೧೫ ರಿಂದ ೨೫ ರೂಪಾಯಿ ಹೆಚ್ಚು ಕೊಡಬೇಕಾಗಬಹುದು. ಇದನ್ನು ಕೇಳಿದ ಮಂಗಳೂರಿನ ಮದ್ಯಪ್ರಿಯರು, “ಈಗಾಗಲೇ ಬಿಸಿಲಿಗೆ ಬೆಂದಿದ್ದೇವೆ, ಈಗ ಬೆಲೆ ಏರಿಕೆ ಮಾಡಿ ನಮ್ಮನ್ನು ಸುಡಬೇಡಿ” ಎಂದು ಸರ್ಕಾರಕ್ಕೆ ವಿನಂತಿಸುತ್ತಿದ್ದಾರೆ.

ಒಟ್ಟಿನಲ್ಲಿ, ಮಂಗಳೂರಿನ ಬಾರ್‌ಗಳಲ್ಲಿ ಈಗ ಮದ್ಯಕ್ಕಿಂತ ಗೊಂದಲವೇ ಜಾಸ್ತಿ ಪೂರೈಕೆಯಾಗುತ್ತಿದೆ. ಬ್ರ್ಯಾಂಡ್ ಸಿಗದೆ ಬರಿಗೈಲಿ ವಾಪಸ್ಸಾಗುತ್ತಿರುವವರು ಮಾತ್ರ “ಒಳ್ಳೆಯ ದಿನಗಳು ಬರಲಿ..” ಎಂದು ಹಾರೈಸುತ್ತಿದ್ದಾರೆ!

ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕರ

error: Content is protected !!