ಬಜಪೆಯಲ್ಲಿ ಬಸ್‌ ಸಿಬ್ಬಂದಿಯ ರಸ್ಲಿಂಗ್; ಖಾಕಿ ಎದುರೇ ನಡೆಯಿತು ಹೈ-ವೋಲ್ಟೇಜ್ ಫೈಟ್

ಬಜಪೆ: ಬಜಪೆ ಬಸ್ ನಿಲ್ದಾಣ ಅಂದ್ರೆ ಅಲ್ಲಿ ಬಸ್ಸುಗಳಿಗಿಂತ ಹೆಚ್ಚಾಗಿ ಜಗಳಗಳೇ ಸೌಂಡು ಮಾಡೋದು ಜಾಸ್ತಿ. ಸೋಮವಾರವಂತೂ ಇಲ್ಲಿ ನಡೆದಿದ್ದು ಸಣ್ಣಪುಟ್ಟ ಗದ್ದಲವಲ್ಲ, ಸಾಕ್ಷಾತ್ ರಿಂಗ್ ಇಲ್ಲದ ‘ರೆಸ್ಟ್ಲಿಂಗ್’! ಬಸ್ಸುಗಳ ಟೈಮಿಂಗ್ಸ್ ವಿಚಾರದಲ್ಲಿ ಸಣ್ಣ ಕಿಡಿ ಹತ್ತಿಕೊಂಡಿದ್ದೇ ತಡ, 26ರ ಹರೆಯದ ಚಾಲಕ ಶ್ರೀನಿವಾಸ ಮತ್ತು 52ರ ಪ್ರಾಯದ ನಿರ್ವಾಹಕ ಸಂತೋಷ್ ಶೆಟ್ಟಿ ಪರಸ್ಪರ ಎದೆಯುಬ್ಬಿಸಿ ನಿಂತಿದ್ದಾರೆ. ವಯಸ್ಸಿನ ಅಂತರವೇನೋ ದೊಡ್ಡದಿದೆ, ಆದರೆ ಕಿತ್ತಾಟದ ವಿಷಯಕ್ಕೆ ಬಂದರೆ ಇಬ್ಬರೂ ಒಬ್ಬರಿಗಿಂತ ಒಬ್ಬರು ನಾನಾ-ನೀನಾ ಎಂದು ಬೀದಿಯಲ್ಲೇ ಕುಸ್ತಿಗೆ ಇಳಿದುಬಿಟ್ಟರು.

ಸಾಂದರ್ಭಿಕ AI ಚಿತ್ರ
ಸಾಂದರ್ಭಿಕ AI ಚಿತ್ರ

ಈ ಇಬ್ಬರು ‘ಶೂರರು’ ಹೊಡೆದಾಡುತ್ತಿರುವಾಗಲೇ ಅಲ್ಲಿಗೆ ಗಸ್ತು ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಪೊಲೀಸರನ್ನು ನೋಡಿದರೆ ಎಂತಾ ಘಟಾನುಘಟಿಗಳೂ ಸೈಲೆಂಟ್ ಆಗ್ತಾರೆ. ಆದರೆ ನಮ್ಮ ಈ ಬಸ್ ವೀರರು ಮಾತ್ರ ‘ಪೊಲೀಸರು ಬಂದಿದ್ದು ನಮಗೇ ಚಿಯರ್ ಮಾಡೋಕೆ’ ಅಂದುಕೊಂಡಂತೆ ಕಂಡಿತು. ಖಾಕಿ ಧರಿಸಿದವರು ಕಣ್ಣ ಮುಂದೆಯೇ ಇದ್ದರೂ, ಇವರ ಮುಷ್ಟಿ ಯುದ್ಧ ಮಾತ್ರ ಕಮ್ಮಿಯಾಗಲಿಲ್ಲ. ಪೊಲೀಸರ ಎದುರೇ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳ ‘ಅಭಿಷೇಕ’ ಮಾಡುತ್ತಾ, ರಸ್ತೆಯಲ್ಲೇ ಮಲ್ಲಯುದ್ಧ ನಡೆಸಿದ್ದು ಸಾರ್ವಜನಿಕರನ್ನು ಅಚ್ಚರಿಗೊಳಿಸಿತು. ಪೊಲೀಸರು ಕೂಡ ಒಂದು ಕ್ಷಣ “ಇದೇನಪ್ಪಾ ಇಷ್ಟೊಂದು ಜೋಶ್?” ಎಂದು ಅವಕ್ಕಾದರು!

ಕರಾವಳಿಯ ಈ ಪ್ರೈವೇಟ್ ಬಸ್ಸುಗಳ ‘ಟೈಮಿಂಗ್ಸ್’ ಕತೆ ಜಗತ್ಪ್ರಸಿದ್ಧ. ಐದೇ ನಿಮಿಷ ಮುಂಚೆ ಬಂತು ಅಥವಾ ಲೇಟಾಯ್ತು ಅಂದ್ರೆ ಸಾಕು, ಇವರಿಗೆ ಮಹಾಭಾರತದ ಯುದ್ಧವೇ ಶುರುವಾಗಿಬಿಡುತ್ತದೆ. ರಸ್ತೆಯಲ್ಲಿ ಬಸ್ಸುಗಳನ್ನು ಹತ್ತಿರ ಹತ್ತಿರ ತಂದು ನಿಲ್ಲಿಸಿ, ಕಿಟಕಿ ಮೂಲಕ ಡೈಲಾಗ್ ಬಿಡುವ ಇವರು, ಈಗ ಬೀದಿಗೆ ಇಳಿದು ಬಡಿದಾಡುತ್ತಿರುವುದು ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿದೆ. ಇವರ ಅಹಂಕಾರದ ಕಾದಾಟಕ್ಕೆ ಬಸ್ಸಿನಲ್ಲಿರುವ ಅಮಾಯಕ ಪ್ರಯಾಣಿಕರು ಮಾತ್ರ ಮೂಕ ಪ್ರೇಕ್ಷಕರಾಗಬೇಕಾಗಿದೆ.

ಕೊನೆಗೂ ಪೊಲೀಸರು ಈ ಇಬ್ಬರು ‘ಪೈಲ್ವಾನರಿಗೆ’ ತಣ್ಣೀರೆರಚಿ, ಬಜಪೆ ಠಾಣೆಗೆ ಕರೆದೊಯ್ದು ಅತಿಥಿ ಸತ್ಕಾರ ಮಾಡಿದ್ದಾರೆ. ಈಗ ಟೈಮಿಂಗ್ಸ್ ಸೆಟ್ ಮಾಡೋದಕ್ಕಿಂತ ಹೆಚ್ಚಾಗಿ, ಹಾಕಿಸಿಕೊಂಡ ಕೇಸನ್ನು ಹೇಗೆ ಮ್ಯಾನೇಜ್ ಮಾಡಬೇಕು ಅಂತ ಇವರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಬಸ್ ಓಡಿಸಬೇಕಾದವರು ಇವತ್ತು ಬೀದಿಯಲ್ಲಿ ಬಡಿದಾಡುತ್ತಿರುವುದನ್ನು ಕಂಡು ಜನ ಮಾತ್ರ “ಇದು ಬಸ್ ನಿಲ್ದಾಣವೋ ಅಥವಾ ಕುಸ್ತಿ ಅಖಾಡವೋ?” ಎಂದು ಆಡಿಕೊಳ್ಳುವಂತಾಗಿದೆ.

error: Content is protected !!