ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದೆ. ನಟ ವಿಜಯ್ ನೇತೃತ್ವದ ʻತಮಿಳಗ ವೆಟ್ರಿ ಕಳಗಂ’ (TVK) 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಮೆರೆದಿದೆ. ಆದರೆ, ಅಧಿಕಾರದ ಗದ್ದುಗೆ ಏರಲು ಬೇಕಾದ ಮ್ಯಾಜಿಕ್ ನಂಬರ್ 118 ಕ್ಕೆ ಹೋಲಿಸಿದರೆ, ವಿಜಯ್ ಪಡೆಗೆ ಇನ್ನೂ 10 ರನ್‌ಗಳ (ಸ್ಥಾನಗಳ) ಕೊರತೆ ಇದೆ. ಈಗ ಎಲ್ಲರ ಕಣ್ಣು ಕೋಟೆಯ ಮೇಲಲ್ಲ, ರಾಜ್ಯಪಾಲರ ಅರಮನೆಯ ಮೇಲೆ ನೆಟ್ಟಿದೆ!

ಫಲಿತಾಂಶ ಬಂದ ಬೆನ್ನಲ್ಲೇ ಆ್ಯಕ್ಷನ್ ಮೂಡ್‌ಗೆ ಇಳಿದಿರುವ ವಿಜಯ್, ಈಗಾಗಲೇ ರಾಜಭವನಕ್ಕೆ ಇ-ಮೇಲ್ ಕಳುಹಿಸಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. “ನಾವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ, ನಮಗೆ ಬಹುಮತ ಸಾಬೀತುಪಡಿಸಲು ಅವಕಾಶ ಕೊಡಿ” ಎಂಬುದು ವಿಜಯ್ ಮನವಿ. ಅಷ್ಟೇ ಅಲ್ಲ, ಸದನದಲ್ಲಿ ತನ್ನ ಬಲ ಪ್ರದರ್ಶಿಸಲು ಅವರು 14 ದಿನಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಈ ಎರಡು ವಾರಗಳ ಕಾಲಾವಕಾಶ ಸಿಕ್ಕರೆ, ವಿಜಯ್ ಮ್ಯಾಜಿಕ್ ನಂಬರ್ ತಲುಪಲು ಬೇಕಾದ 10 ಶಾಸಕರನ್ನು ಎಲ್ಲಿಂದ ತರುತ್ತಾರೆ ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆ.

ಕಿಂಗ್ ಮೇಕರ್ ಆಗಲಿದೆಯೇ ಕಾಂಗ್ರೆಸ್ ಅಥವಾ ಎಐಎಡಿಎಂಕೆ?
ಸದ್ಯದ ಪರಿಸ್ಥಿತಿಯಲ್ಲಿ ವಿಜಯ್ ಮುಂದೆ ಮೂರು ರೋಚಕ ದಾರಿಗಳಿವೆ:
ಸಿನಾರಿಯೋ 1: ಕಾಂಗ್ರೆಸ್ (INC), ವಿಸಿಕೆ (VCK) ಮತ್ತು ಎಡಪಕ್ಷಗಳ ಬೆಂಬಲ ಪಡೆಯುವುದು. ಈ ಒಕ್ಕೂಟ ಸೇರಿದರೆ ವಿಜಯ್ ಆರಾಮವಾಗಿ ಸಿಎಂ ಕುರ್ಚಿಯಲ್ಲಿ ಕೂರಬಹುದು.
ಸಿನಾರಿಯೋ 2: ಎಐಎಡಿಎಂಕೆ (ADMK) ಜೊತೆಗಿನ ಅಚ್ಚರಿಯ ಮೈತ್ರಿ. ಬಿಜೆಪಿಯನ್ನು ಹೊರಗಿಟ್ಟು ಈ ಎರಡು ಪ್ರಾದೇಶಿಕ ಶಕ್ತಿಗಳು ಒಂದಾದರೆ ತಮಿಳುನಾಡು ರಾಜಕೀಯದ ಚಿತ್ರಣವೇ ಬದಲಾಗಲಿದೆ.
ಸಿನಾರಿಯೋ 3: ಅಲ್ಪಮತದ ಸರ್ಕಾರ! ಒಂದು ವೇಳೆ ಯಾವ ಪಕ್ಷವೂ ಬಹಿರಂಗವಾಗಿ ಬೆಂಬಲ ನೀಡದಿದ್ದರೂ, ವಿಜಯ್ ‘ಅಲ್ಪಮತದ ಸರ್ಕಾರ’ ರಚಿಸಬಹುದು. ವಿಶ್ವಾಸಮತದ ವೇಳೆ ವಿರೋಧ ಪಕ್ಷದ ಕೆಲವು ಶಾಸಕರು ಗೈರುಹಾಜರಾದರೆ (Abstain), ವಿಜಯ್ ಸೇಫ್ ಆಗಲಿದ್ದಾರೆ.

ಪರಿಣಾಮಗಳೇನು?
ತಮಿಳುನಾಡಿನಲ್ಲಿ ಕಳೆದ ಐದು ದಶಕಗಳಿಂದ ನಡೆಯುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಮ್ಯೂಸಿಕಲ್ ಚೇರ್ ಆಟಕ್ಕೆ ಈಗ ಬ್ರೇಕ್ ಬಿದ್ದಿದೆ. 2024ರಲ್ಲಿ ಹುಟ್ಟಿದ ಪಕ್ಷವೊಂದು 2026ರಲ್ಲೇ ಅಧಿಕಾರದ ಹೊಸ್ತಿಲಿಗೆ ಬಂದಿರುವುದು ಸಣ್ಣ ವಿಷಯವಲ್ಲ. ಶೇ. 35ರಷ್ಟು ಮತ ಹಂಚಿಕೆ ಪಡೆದಿರುವ ವಿಜಯ್, ಈಗ ರಾಜಕೀಯದ ‘ಮಾಸ್ಟರ್ ಪ್ಲಾನ್’ ರೂಪಿಸುತ್ತಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದು ಒಂದನ್ನು ಬಿಟ್ಟುಕೊಡುವುದರಿಂದ ಅವರ ಸಂಖ್ಯಾಬಲ 107ಕ್ಕೆ ಕುಸಿಯಲಿದೆ. ಈ 107 ಅನ್ನು 118 ಮಾಡುವುದು ಹೇಗೆ? ವಿಜಯ್ ಅವರ ಈ ʻಪೊಲಿಟಿಕಲ್ ಥ್ರಿಲ್ಲರ್’ ಕ್ಲೈಮ್ಯಾಕ್ಸ್ ತಲುಪಲು ಇನ್ನೂ ಕೆಲವೇ ದಿನಗಳು ಬಾಕಿ ಇವೆ