ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ ಭಾರತದ ಚುನಾವಣಾ ಫಲಿತಾಂಶ: ʻಮೋವಿʼ ಬಗ್ಗೆ ವಿದೇಶಿ ಮಾಧ್ಯಮಗಳು ಹೇಳಿದ್ದೇನು?

ನವದದೆಹಲಿ: ಭಾರತದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶಗಳನ್ನು ವಿದೇಶಿ ಮಾಧ್ಯಮಗಳು ಅತ್ಯಂತ ಆಸಕ್ತಿಯಿಂದ ವರದಿ ಮಾಡಿವೆ. ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿದ ಗೆಲುವು ಮತ್ತು ತಮಿಳುನಾಡಿನಲ್ಲಿ ನಟ ಜೋಸೆಫ್ ವಿಜಯ್ ಅವರ ಭರ್ಜರಿ ರಾಜಕೀಯ ಪ್ರವೇಶವು ಅಂತರಾಷ್ಟ್ರೀಯ ಪತ್ರಿಕೆಗಳ ಮುಖಪುಟದಲ್ಲಿ ಸ್ಥಾನ ಪಡೆದಿವೆ.

ಬ್ರಿಟಿಷ್ ಮಾಧ್ಯಮಗಳ ವಿಶ್ಲೇಷಣೆ:
ಲಂಡನ್‌ನ ಪ್ರಸಿದ್ಧ ಮಾಧ್ಯಮ ಸಂಸ್ಥೆ ಬಿಬಿಸಿ (BBC), ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ ಬಿಜೆಪಿ ಜಯಭೇರಿ ಬಾರಿಸಿರುವುದನ್ನು ಪ್ರಮುಖವಾಗಿ ವರದಿ ಮಾಡಿದೆ. “ಮೋದಿಯವರ ಬಿಜೆಪಿ ಭಾರತದ ಅತ್ಯಂತ ಕಠಿಣ ರಾಜಕೀಯ ಗಡಿಗಳಲ್ಲಿ ಒಂದಾದ ಬಂಗಾಳವನ್ನು ಗೆದ್ದುಕೊಂಡಿದೆ” ಎಂದು ಬಿಬಿಸಿ ಬಣ್ಣಿಸಿದೆ. ಇದೇ ವೇಳೆ ʻದಿ ಗಾರ್ಡಿಯನ್’ ಪತ್ರಿಕೆಯು, ಬಂಗಾಳದಲ್ಲಿ ಬಿಜೆಪಿಯ ಈ ಐತಿಹಾಸಿಕ ಜಯವು ಈಗಾಗಲೇ ದುರ್ಬಲಗೊಂಡಿರುವ ವಿರೋಧ ಪಕ್ಷಗಳಿಗೆ ಬಿದ್ದ ಮತ್ತೊಂದು ಮರ್ಮಾಘಾತ ಎಂದು ವಿಶ್ಲೇಷಿಸಿದೆ.

ಅಮೆರಿಕದ ಮಾಧ್ಯಮಗಳಲ್ಲಿ ವಿಜಯ್ ಅಬ್ಬರ:
ಅಟ್ಲಾಂಟಿಕ್ ಸಾಗರದ ಆಚೆಗಿನ ಅಮೆರಿಕದ ಪತ್ರಿಕೆಗಳು ಸಹ ಈ ಫಲಿತಾಂಶಕ್ಕೆ ಬೆರಗಾಗಿವೆ. ʻನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ಪಶ್ಚಿಮ ಬಂಗಾಳದ ಫಲಿತಾಂಶವನ್ನು ʻಐತಿಹಾಸಿಕ’ ಎಂದು ಕರೆದಿದೆ. ಇದಕ್ಕಿಂತಲೂ ಹೆಚ್ಚಾಗಿ, ತಮಿಳುನಾಡಿನಲ್ಲಿ ರಾಜಕೀಯಕ್ಕೆ ಹೊಸಬರಾದ ನಟ ಜೋಸೆಫ್ ವಿಜಯ್ ಅವರ ಪಕ್ಷವು ಸ್ಥಾಪಿತ ದ್ರಾವಿಡ ಪಕ್ಷಗಳನ್ನು ಹಿಂದಿಕ್ಕಿ 107 ಸ್ಥಾನಗಳನ್ನು ಗೆದ್ದಿರುವುದನ್ನು “ದಿನದ ಅತಿದೊಡ್ಡ ಅಚ್ಚರಿ” ಎಂದು ಈ ಪತ್ರಿಕೆ ವರದಿ ಮಾಡಿದೆ. ‘ವಾಷಿಂಗ್ಟನ್ ಪೋಸ್ಟ್’ ತನ್ನ ವರದಿಯಲ್ಲಿ, ಈ ಗೆಲುವು ಪ್ರಧಾನಿ ಮೋದಿಯವರ 2029ರ ಚುನಾವಣಾ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ನೆರೆ ರಾಜ್ಯಗಳ ಮಾಧ್ಯಮಗಳ ಗಮನ:
ಪಾಕಿಸ್ತಾನದ ‘ಡಾನ್’ ಮತ್ತು ಬಾಂಗ್ಲಾದೇಶದ ‘ಢಾಕಾ ಟ್ರಿಬ್ಯೂನ್’ ಪತ್ರಿಕೆಗಳು ಸಹ ಭಾರತದ ಚುನಾವಣಾ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿವೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಚೊಚ್ಚಲ ಚುನಾವಣೆ ಎದುರಿಸಿದ ನಟ ವಿಜಯ್ ಅವರ ಎದುರು ಸೋತಿರುವುದನ್ನು ಈ ಪತ್ರಿಕೆಗಳು ‘ಚುನಾವಣಾ ಆಘಾತ’ ಎಂದು ವರದಿ ಮಾಡಿವೆ. ಬಂಗಾಳದಲ್ಲಿ ಬಿಜೆಪಿಯ ಈ ಜಯಭೇರಿಯು ದೇಶದ ರಾಜಕೀಯ ಭೂಪಟವನ್ನೇ ಬದಲಿಸಿದೆ ಎಂದು ವಿದೇಶಿ ಮಾಧ್ಯಮಗಳು ಒಕ್ಕೊರಲಿನಿಂದ ವಿಶ್ಲೇಷಿಸಿವೆ.

error: Content is protected !!