ಮಂಗಳೂರು: ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಮತ್ತು ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಸೇವಾ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ತಂಡಗಳ ‘ಓವರ್ ಆರ್ಮ್’ ಕ್ರಿಕೆಟ್ ಪಂದ್ಯಕೂಟ ʻಲೆಜೆಂಡ್ಸ್ ಕ್ರಿಕೆಟ್ ಲೀಗ್ (LCL) ಸೀಸನ್-5′ ಮೇ 9 ಮತ್ತು 10 ರಂದು ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಕಿರಣ್ ಆಚಾರ್ಯ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಈ ಕ್ರೀಡಾಕೂಟವು ಹಿರಿಯ ಕ್ರಿಕೆಟಿಗರನ್ನು ಒಗ್ಗೂಡಿಸುವ ‘ಹಿರಿಯ ಕ್ರಿಕೆಟ್ ಹಬ್ಬ’ವಾಗಿ ಮೂಡಿಬರಲಿದೆ ಎಂದರು.

ಪಂದ್ಯಕೂಟದಲ್ಲಿ ವಿಜೇತ ತಂಡಗಳಿಗೆ ಭರ್ಜರಿ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನ 1,00,005 ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ: 50,005 ರೂ. ನಗದು ಹಾಗೂ ಟ್ರೋಫಿ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಈ ಪಂದ್ಯಕೂಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 45 ವರ್ಷ ಮೇಲ್ಪಟ್ಟ ನುರಿತ ಆಟಗಾರರ ತಂಡಗಳು ಭಾಗವಹಿಸಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಲಿದೆ. ಕ್ರೀಡಾಕೂಟದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಎಂದು ಕಿರಣ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ಹಾಗೂ ಸದಸ್ಯರಾದ ಪೃಥ್ವಿರಾಜ್ ಶೆಟ್ಟಿ ಮಧ್ಯ ಉಪಸ್ಥಿತರಿದ್ದರು.