ಮಲಯಾಳಂ ಹಿರಿಯ ನಟ ಸಂತೋಷ್ ಕೆ. ನಾಯರ್ ರಸ್ತೆ ಅಪಘಾತಕ್ಕೆ ಬಲಿ- ಪತ್ನಿ ಗಂಭೀರ

ಅಡೂರು (ಕೇರಳ): ಮಲಯಾಳಂ ಚಿತ್ರರಂಗದ ಖ್ಯಾತ ಪೋಷಕ ನಟ ಸಂತೋಷ್ ಕೆ. ನಾಯರ್ ಅವರು ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅಡೂರಿನಲ್ಲಿ ಇವರು ಚಲಿಸುತ್ತಿದ್ದ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತಕ್ಷಣ ನಟ ಸಂತೋಷ್ ಅವರನ್ನು ಅಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದ ಪರಿಣಾಮ ಅವರು ಕೊನೆಯುಸಿರೆಳೆದರು. ಅಪಘಾತದ ಸಮಯದಲ್ಲಿ ಅವರ ಪತ್ನಿ ಕೂಡ ಜೊತೆಯಲ್ಲಿದ್ದು, ಪ್ರಸ್ತುತ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1982ರಲ್ಲಿ ʻಇತು ಆರತಿ ಕಥೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಸಂತೋಷ್ ಕೆ. ನಾಯರ್ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ವಿಶೇಷವಾಗಿ ಖಳನಾಯಕ ಹಾಗೂ ಹಾಸ್ಯ ನಟನಾಗಿ ಅವರು ಮಲಯಾಳಂ ಪ್ರೇಕ್ಷಕರ ಮನ ಗೆದ್ದಿದ್ದರು. ಬೆಳ್ಳಿ ಪರದೆಯಷ್ಟೇ ಅಲ್ಲದೆ ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದರು.

ಸಂತೋಷ್ ಅವರು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಕಾಲೇಜು ದಿನಗಳ ಗೆಳೆಯರಾಗಿದ್ದರು. ಇಬ್ಬರೂ ಎಂಜಿ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಸಂತೋಷ್ ಅವರು ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದಿದ್ದರೆ, ಮೋಹನ್‌ಲಾಲ್ ವಾಣಿಜ್ಯ ವಿಭಾಗದಲ್ಲಿದ್ದರು. ಮೋಹನ್‌ಲಾಲ್ ಮತ್ತು ತಮ್ಮ ನಡುವಿನ ಕಾಲೇಜು ದಿನಗಳ ಸುಂದರ ನೆನಪುಗಳನ್ನು ಅವರು ಅನೇಕ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದರು.

ಸಂತೋಷ್ ಕೆ. ನಾಯರ್ ಅವರ ಕೊನೆಯ ಸಿನಿಮಾ ‘ಭರತನಾಟ್ಯಂ 2: ಮೋಹಿನಿಯಾಟ್ಟಂ’ (2026). ಕೃಷ್ಣದಾಸ್ ಮುರಳಿ ನಿರ್ದೇಶನದ ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಅವರ ಅಕಾಲಿಕ ನಿಧನಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

error: Content is protected !!