ಮಮತಾ ಕೋಟೆಯಲ್ಲಿ ಕಮಲ ಕಮಾಲ್: ಸ್ಟಾಲಿನ್ ಕೋಟೆಗೆ ದಳಪತಿ ಲಗ್ಗೆ; ಕೇರಳದಲ್ಲಿ ಯುಡಿಎಫ್ ಅಬ್ಬರ

ಮಂಗಳೂರು: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಅತ್ಯಂತ ರೋಚಕ ಹಂತಕ್ಕೆ ತಲುಪಿದ್ದು, ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗುವ ಮುನ್ಸೂಚನೆ ಸಿಗುತ್ತಿದೆ. ದಕ್ಷಿಣದ ದ್ರಾವಿಡ ಕೋಟೆಗಳಿಂದ ಹಿಡಿದು ಬಂಗಾಳದ ಕಣಿವೆಯವರೆಗೆ ಮತದಾರರು ಈ ಬಾರಿ ಅಚ್ಚರಿಯ ತೀರ್ಪು ನೀಡಿದ್ದಾರೆ.

ಮಮತಾ ಕೋಟೆಯಲ್ಲಿ ಕಮಲ ಕಮಾಲ್
ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲದ ಮಮತಾ ಬ್ಯಾನರ್ಜಿ ಅವರ ಅಧಿಪತ್ಯಕ್ಕೆ ಈ ಬಾರಿ ಭಾರಿ ಪೆಟ್ಟು ಬಿದ್ದಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಭಾರತೀಯ ಜನತಾ ಪಾರ್ಟಿ (BJP) ಸರಳ ಬಹುಮತದ ಗಡಿಯನ್ನು ದಾಟಿ ಮುನ್ನಡೆ ಕಾಯ್ದುಕೊಂಡಿದೆ. ಮಮತಾ ಬ್ಯಾನರ್ಜಿ ಅವರ ಭವಾನಿಪುರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದರೂ, ರಾಜ್ಯದ ಉಳಿದ ಭಾಗಗಳಲ್ಲಿ ತೃಣಮೂಲ ಕಾಂಗ್ರೆಸ್ (TMC) ಭಾರಿ ಹಿನ್ನಡೆ ಅನುಭವಿಸುತ್ತಿದೆ. ಇದು ಬಂಗಾಳದ ರಾಜಕೀಯದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡುವ ಲಕ್ಷಣಗಳು ಗೋಚರಿಸುತ್ತಿವೆ.

ದಳಪತಿ ಅಬ್ಬರಕ್ಕೆ ದ್ರಾವಿಡ ಪಕ್ಷಗಳ ನಡುಕ!
ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲ ಆಳಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ದ್ವಿಪಕ್ಷೀಯ ಆಡಳಿತಕ್ಕೆ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಅಂತಿಮ ಮೊಳೆ ಹೊಡೆಯುವ ಹಂತಕ್ಕೆ ತಲುಪಿದೆ. ಒಟ್ಟು 234 ಕ್ಷೇತ್ರಗಳ ಪೈಕಿ ಟಿವಿಕೆ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಹಾಲಿ ಸಿಎಂ ಎಂ.ಕೆ. ಸ್ಟಾಲಿನ್ ಅವರು ಹಿನ್ನಡೆ ಅನುಭವಿಸುತ್ತಿರುವುದು ಡಿಎಂಕೆ ಪಾಳೆಯದಲ್ಲಿ ಆತಂಕ ಮೂಡಿಸಿದೆ. ವಿಜಯ್ ಸಿಎಂ ಸೀಟಿನಲ್ಲಿ ಕೂರುವುದು ಪಕ್ಕಾ ಆಗಿದೆ.

ಕೇರಳದಲ್ಲಿ ಯುಡಿಎಫ್ ಅಬ್ಬರ: ಎಡಪಕ್ಷಗಳ ಹ್ಯಾಟ್ರಿಕ್ ಕನಸು ಭಗ್ನ!
ಕೇರಳದಲ್ಲಿ ಸತತ ಮೂರನೇ ಬಾರಿ ಅಧಿಕಾರ ಹಿಡಿಯುವ ಎಲ್‌ಡಿಎಫ್ (LDF) ಕನಸಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ತಣ್ಣೀರು ಸುರಿದಿದೆ. ಟ್ರೆಂಡ್‌ಗಳ ಪ್ರಕಾರ ಯುಡಿಎಫ್ 99ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಹುಮತದತ್ತ ಸಾಗುತ್ತಿದೆ. ಪಿಣರಾಯಿ ವಿಜಯನ್ ಅವರ ಆಡಳಿತದ ವಿರುದ್ಧದ ಅಲೆ ಕಾಂಗ್ರೆಸ್‌ಗೆ ವರದಾನವಾಗಿ ಪರಿಣಮಿಸಿದ್ದು, ದಶಕದ ನಂತರ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ⬇️

ಅಸ್ಸಾಂ ಮತ್ತು ಪುದುಚೇರಿ: ಎನ್‌ಡಿಎ ಭದ್ರಕೋಟೆ ಸುಭದ್ರ!
ಅಸ್ಸಾಂ: ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಮೈತ್ರಿಕೂಟವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಭರ್ಜರಿ ಜಯಭೇರಿಯತ್ತ ಸಾಗಿದೆ.
ಪುದುಚೇರಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಹಾದಿಯಲ್ಲಿದೆ.

ಒಟ್ಟಾರೆಯಾಗಿ 2026ರ ಈ ಚುನಾವಣೆಗಳು ಪ್ರಾದೇಶಿಕ ಪಕ್ಷಗಳ ಅಬ್ಬರ ಹಾಗೂ ಬಿಜೆಪಿಯ ವಿಸ್ತರಣಾ ತಂತ್ರಗಾರಿಕೆಗೆ ಸಾಕ್ಷಿಯಾಗಿವೆ. ಈ ಫಲಿತಾಂಶಗಳು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

error: Content is protected !!