ಮಂಗಳೂರು: ನಗರದ ಕೂಳೂರು ಪಂಜಮೊಗರುವಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಸಂಘದ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡ ‘ಮೊಗೇರ ಸೌಧ’ ಇದೇ ಮೇ 10ರಂದು ಉದ್ಘಾಟನೆಗೊಳ್ಳಲಿದೆ” ಎಂದು ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಸೀತಾರಾಮ ಕೊಂಬಾಡಿ ತಿಳಿಸಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 20,000 ಚದರ ಅಡಿ ವಿಸ್ತೀರ್ಣದಲ್ಲಿ, 4 ಅಂತಸ್ತಿನ ಈ ಬೃಹತ್ ಕಟ್ಟಡವನ್ನು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರ್ಮಿಸಲಾಗಿದೆ. ಈ ಸೌಧವು ಕೇವಲ ಸಮುದಾಯದ ಭವನವಾಗಿರದೆ, ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿಯ ಕೇಂದ್ರವಾಗಲಿದೆ. ದೂರದ ಊರುಗಳಿಂದ ಶಿಕ್ಷಣಕ್ಕಾಗಿ ಮಂಗಳೂರಿಗೆ ಬರುವ ಬಡ ವರ್ಗದ ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗಾಗಿ ಇಲ್ಲಿ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದರೊಂದಿಗೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಟ್ಟಡದಲ್ಲಿ ಸ್ವ-ಉದ್ಯೋಗ ತರಬೇತಿ ಕೇಂದ್ರವನ್ನೂ ಒಳಗೊಂಡಿದೆ ಎಂದರು.

ಜಿಲ್ಲೆಯ ದಲಿತ ಸಮಾಜದ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಬಹುಮಹಡಿ ಕಟ್ಟಡವನ್ನು ಸ್ವಂತ ಪ್ರಯತ್ನದಿಂದ ನಿರ್ಮಿಸಿರುವುದು ಇದೇ ಮೊದಲು. ಈ ಯೋಜನೆಗಾಗಿ 0.20 ಎಕರೆ ಜಮೀನನ್ನು ಕ್ರಯಕ್ಕೆ ಪಡೆದುಕೊಂಡು, ಸರ್ಕಾರದ ಜನಪ್ರತಿನಿಧಿಗಳ ವಿಶೇಷ ಅನುದಾನ ಹಾಗೂ ಸಮುದಾಯದ ಸಹಕಾರದೊಂದಿಗೆ ಈ ಭವ್ಯ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.

ಮೇ 10ರಂದು ಬೆಳಿಗ್ಗೆ 9:30ಕ್ಕೆ ಕೂಳೂರು ಜಂಕ್ಷನ್‌ನಿಂದ ಪಂಜಮೊಗರುವಿನವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ವಿವಿಧ ವೇಷಭೂಷಣಗಳು, ತಾಲೀಮು ಪ್ರದರ್ಶನ, ಕುಣಿತ ಭಜನೆಗಳು ಮೇಳೈಸಲಿವೆ. ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಫರೀದ್, ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಭರತ್‌ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮೊಗೇರ ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸೀತಾರಾಮ ಕೊಂಬಾಡಿ ಅವರು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುಂದರ ಮೇರ, ಪ್ರಧಾನ ಕಾರ್ಯದರ್ಶಿ ಗಿರಿಯಪ್ಪ ಎಸ್., ಕೋಶಾಧಿಕಾರಿ ನಾರಾಯಣ ಉಳ್ಳಾಲ್, ದಲಿತ ಮುಖಂಡ ಅಶೋಕ್ ಕೊಂಬಾಡಿ ಹಾಗೂ ಉಪಾಧ್ಯಕ್ಷ ಗೋಪಾಲ ಕೃಷ್ಣಾಪುರ ಮತ್ತು ರಾಮ ಕೊಂಬಾಡಿ ಉಪಸ್ಥಿತರಿದ್ದರು.