ಮಂಗಳೂರು: ಕಲಾವಿದರಿಗೆ ಮೇಕಪ್ ಬಳಸದೆ ಸಣ್ಣ ಬಜೆಟ್‌ನಲ್ಲಿ, ನೈಜ ಘಟನೆಯನ್ನು ಆಧರಿಸಿ ಸಿದ್ಧಗೊಂಡಿರುವ ನಮ್ಮ ‘ಮಂಗಮಾಯ’ ಸಿನಿಮಾ ಇದೇ ಬರುವ ಮೇ 8ರಂದು ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಪ್ರಸಾದ್ ಪುತ್ತೂರು ಅವರು ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದು ಒಂದೇ ದಿನದಲ್ಲಿ ನಡೆಯುವ ಕಥಾ ಹಂದರವನ್ನು ಹೊಂದಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ವಿಶೇಷವೆಂದರೆ ಈ ಸಿನಿಮಾದಲ್ಲಿ ಯಾವುದೇ ಕಲಾವಿದರಿಗೆ ಮೇಕಪ್ ಬಳಸಿಲ್ಲ ಮತ್ತು ಚಿತ್ರದಲ್ಲಿ ನಾಯಕಿಯ ಪಾತ್ರವೂ ಇಲ್ಲ. ಈ ಚಿತ್ರ ಪುತ್ತೂರು ಬ್ರದರ್ಸ್ ಎಂಟರ್ ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿಬಂದಿದೆ ಎಂದರು.

ನಿರ್ಮಾಣ ಮತ್ತು ನಿರ್ದೇಶನದ ಜೊತೆಗೆ ಕರಾವಳಿ ಭಾಗದ ಹಲವು ಕಲಾವಿದರು ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಈ ಚಿತ್ರ ಸಿದ್ಧಗೊಂಡಿದೆ. ಸಿನಿಮಾದಲ್ಲಿ ದಕ್ಷಿಣ ಕನ್ನಡದ ಭಾಷಾ ಸೊಗಡನ್ನು ಬಳಸಲಾಗಿದ್ದು, ಇದು ಪ್ರೇಕ್ಷಕರಿಗೆ ಹತ್ತಿರವಾಗಲಿದೆ. ಮೈಸೂರಿನ ವಿದ್ಯಾರಣ್ಯಪುರದಲ್ಲಿ ಕೇವಲ 43 ದಿನಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ತಮ್ಮ ಹಿನ್ನೆಲೆಯ ಬಗ್ಗೆ ಮಾತನಾಡಿದ ಪ್ರಸಾದ್, “ಖ್ಯಾತ ನಿರ್ದೇಶಕ ದಿ. ಕಾಶಿನಾಥ್ ಅವರ ಸಿನಿಮಾಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ ಅನುಭವ ನನಗಿದೆ. ಹತ್ತಾರು ಸಿನಿಮಾಗಳಲ್ಲಿ ನಟನೆ, ಸ್ಕ್ರಿಪ್ಟ್ ಮತ್ತು ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿದ ನಂತರ ಸ್ವತಂತ್ರ ನಿರ್ದೇಶಕನಾಗಿ ‘ಮಂಗಮಾಯ’ ನನ್ನ ಮೊದಲ ಪ್ರಯತ್ನ” ಎಂದು ಹಂಚಿಕೊಂಡರು.
ಯುವ ತಂಡದ ಈ ಪ್ರಾಮಾಣಿಕ ಪ್ರಯತ್ನವನ್ನು ಜನರು ಬೆಂಬಲಿಸಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಕಾರ್ಯಕಾರಿ ನಿರ್ಮಾಪಕ ಪ್ರಸನ್ನ ಪುತ್ತೂರು, ಸಹ ನಿರ್ದೇಶಕ ಜಗದೀಶ್ ಅಳಿಕೆ, ಸಿನಿಮಾಟೋಗ್ರಾಫರ್ ವಿಷ್ಣುಪ್ರಸಾದ್ ಪಿ. ಇದ್ದರು.

ಚಿತ್ರದ ಬಗ್ಗೆ:
ಕೋವಿಡ್ ಮೊದಲ ಅಲೆಯಲ್ಲಿ ಉದ್ಯೋಗವಿಲ್ಲದೆ ಕಂಗಾಲಾದ ನಾಯಕ, ಲಾಡ್ಜ್ ಒಂದರಲ್ಲಿ ರೂಮ್ ಬಾಯ್ ಆಗಿ ಸೇರುತ್ತಾನೆ. ಅಲ್ಲಿ ನಡೆದ ಅನಿರೀಕ್ಷಿತ ಘಟನೆಯಲ್ಲಿ ಪಕ್ಕೆಲುಬು ಮುರಿದುಕೊಂಡು ಕೆಲಸ ಕಳೆದುಕೊಳ್ಳುವ ಆತನಿಗೆ, ಎರಡನೇ ಅಲೆಯ ಸಂದರ್ಭದಲ್ಲಿ ಅದೇ ಲಾಡ್ಜ್‌ನಲ್ಲಿ ಕಳೆದುಹೋದ ಹಣದ ಬ್ಯಾಗ್ ಮತ್ತು ಅದರ ಸುತ್ತ ಹೆಣೆದಿರುವ ರಹಸ್ಯಗಳು ಎದುರಾಗುತ್ತವೆ. ಲಾಡ್ಜ್ ಮಾಲೀಕ ಮತ್ತು ಆತನ ತಂದೆ ನಾಯಕನನ್ನು ಹಿಡಿಯಲು ನಡೆಸುವ ತಂತ್ರಗಳು ಹಾಗೂ ನಾಯಕ ತನ್ನ ಸೇಡನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದೇ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಹೂರಣ.