ಸತ್ಯಾಧಾರಿತ, ಮಾನವಪರ ವರದಿಗಾರಿಕೆಗೆ ಮಾಧ್ಯಮಗಳು ಆದ್ಯತೆ ನೀಡಲಿ: ಪ್ರೊ. ಸುಮಾ ಬಲ್ಲಾಳ್

ನಿಟ್ಟೆ: “ಮಾಧ್ಯಮಗಳು ಸತ್ಯಾಂಶ ಮತ್ತು ದತ್ತಾಂಶಗಳನ್ನು ಆಧಾರವಾಗಿರಿಸಿಕೊಂಡು ಮಾನವ ಪರವಾದ ವರದಿಗಾರಿಕೆಯನ್ನು ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು” ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪ ಕುಲಸಚಿವೆ ಪ್ರೊ. ಡಾ. ಸುಮಾ ಬಲ್ಲಾಳ್ ಅವರು ಅಭಿಪ್ರಾಯಪಟ್ಟರು.

ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಷನ್ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ಮಾಧ್ಯಮ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಮಾಧ್ಯಮ ಕ್ಷೇತ್ರವು ಇಂದು ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬದಲಾಗುತ್ತಿದೆ. ಆದರೆ, ಶಾಂತಿ ಮತ್ತು ಯುದ್ಧವಿರಾಮದಂತಹ ಜಾಗತಿಕ ಆಶಯಗಳ ವಿಷಯದಲ್ಲಿ ಮಾಧ್ಯಮಗಳು ಜನಪರ ನಿಲುವು ತಳೆಯುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಚಿದಂಬರ ಬೈಕಂಪಾಡಿ ಅವರಿಗೆ ಗೌರವ:
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ‘ಮಾಧ್ಯಮ ಶ್ರೇಷ್ಠತಾ ಪ್ರಶಸ್ತಿ–2026’ ಅನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ನನ್ನ ವೃತ್ತಿಜೀವನದಲ್ಲಿ ನಾನು ಯಾವಾಗಲೂ ಸತ್ಯಾಧಾರಿತ ವರದಿಗಾರಿಕೆಗೆ ಮೊದಲ ಆದ್ಯತೆ ನೀಡಿದ್ದೇನೆ. ಇಂದಿನ ವಿದ್ಯಾರ್ಥಿಗಳು ಸತ್ಯಾಂಶವನ್ನು ಸಂಶೋಧಿಸುವ ಹಾಗೂ ಧೈರ್ಯದಿಂದ ವರದಿ ಮಾಡುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ರಾಯ್ಟರ್ಸ್‌ ನಿವೃತ್ತ ವರದಿಗಾರ ಸ್ಟ್ಯಾನ್ಲಿ ಕರ್ವಾಲೋ ಮಾತನಾಡಿ, “ಸುದ್ದಿಯನ್ನು ನಿರ್ಧರಿಸುವ ಅಧಿಕಾರ ಕೃತಕ ಬುದ್ಧಿಮತ್ತೆಗೆ (AI) ಇರಬಾರದು. ವರದಿಗಾರನಿಗೆ ತನ್ನ ಸುದ್ದಿಯನ್ನು ಪ್ರಕಟಿಸುವ ಸ್ವತಂತ್ರ ಹಾಗೂ ಓದುಗನಿಗೆ ತನಗೆ ಬೇಕಾದ ಸುದ್ದಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಬೇಕು” ಎಂದು ಒತ್ತಿ ಹೇಳಿದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ⬇️

ಸಮಾವೇಶದ ಅಂಗವಾಗಿ ನಡೆದ ಪತ್ರಿಕಾ ಕಾರ್ಯಾಗಾರದಲ್ಲಿ ‘ಡೇಟಾ ಲೀಡ್ಸ್‌ ಅಕಾಡೆಮಿ’ಯ ಎಸ್‌. ಕುಮಾರ್ ಅವರು ಎಐ (AI) ತಂತ್ರಜ್ಞಾನದ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ವಿಚಾರ ಗೋಷ್ಠಿಯಲ್ಲಿ ಟೈಮ್ಸ್ ಆಫ್‌ ಇಂಡಿಯಾದ ಚೇತನ್‌ ಕುಮಾರ್ ಮತ್ತು ಡಾ. ವಿಗ್ನೇಶ್‌ ರಾಮ್ ಪಾಲ್ಗೊಂಡಿದ್ದರು.

ಕಾಲೇಜಿನ ಮುಖ್ಯಸ್ಥರಾದ ಡಾ. ಮೌಲ್ಯ ಬಾಲಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ನೇಸರ ಕಾಡನಕುಪ್ಪೆ ಪ್ರಶಸ್ತಿ ಸಂದೇಶ ವಾಚಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ ಬಿ.ಎನ್. ಉಪಸ್ಥಿತರಿದ್ದರು. ಸಮಾವೇಶದ ಸಂಘಟನಾ ಕಾರ್ಯದರ್ಶಿ ಡಾ. ಅನಿಶಾ ವಂದಿಸಿದರು ಮತ್ತು ಡಾ. ಪ್ರಣಮ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!