ಮರವಂತೆಯಲ್ಲಿ ಸರಣಿ ಅಪಘಾತ- ಇಬ್ಬರು ಬಲಿ: 20ಕ್ಕೂ ಅಧಿಕ ಮಂದಿಗೆ ಗಾಯ

ಕುಂದಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮರವಂತೆ ಬೀಚ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತವು ಇಬ್ಬರ ಬಲಿಯನ್ನು ಪಡೆದಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಆರು ಮಂದಿ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗದ ಶಂಕರಘಟ್ಟದ ರಂಭಾಪುರಿ ಕಾಲೇಜಿನ ವಿದ್ಯಾರ್ಥಿಗಳಿದ್ದ ಪ್ರವಾಸಿ ಬಸ್, ಗ್ಯಾಸ್ ಟ್ಯಾಂಕರ್ ಹಾಗೂ ಲಾರಿಯ ನಡುವೆ ನಡೆದ ಈ ಭೀಕರ ಸಂಘಟನೆಯಲ್ಲಿ ಬಸ್ ಚಾಲಕ ಹಾಗೂ ಮತ್ತೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿವಮೊಗ್ಗದಿಂದ ಮುರ್ಡೇಶ್ವರಕ್ಕೆ ಪ್ರವಾಸ ಮುಗಿಸಿ ಉಡುಪಿಯತ್ತ ಸಾಗುತ್ತಿದ್ದ ಕೇರಳ ನೋಂದಣಿಯ ಖಾಸಗಿ ಬಸ್, ಮರವಂತೆ ಬೀಚ್ ಎದುರಿನ ರಸ್ತೆಯಲ್ಲಿ ಚಲಿಸುತ್ತಿತ್ತು. ಚಾಲಕನ ಗಮನ ಪಕ್ಕದಲ್ಲೇ ಇದ್ದ ಸಮುದ್ರದ ಕಡೆಗೆ ಹರಿದಿದ್ದರಿಂದ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯಲ್ಲಿ ನಿಂತಿದ್ದ ಗ್ಯಾಸ್ ಟ್ಯಾಂಕರ್‌ಗೆ ಅಪ್ಪಳಿಸಿದೆ. ಅಪಘಾತದ ರಭಸ ಎಷ್ಟಿತ್ತೆಂದರೆ ಬಸ್ ನಂತರ ಮುಂಭಾಗದಲ್ಲಿದ್ದ ಲಾರಿಗೂ ಢಿಕ್ಕಿ ಹೊಡೆದಿದ್ದು, ಬಸ್ಸಿನ ಮುಂಭಾಗವು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ⬇️

Kundapur | ತ್ರಾಸಿ ಬಳಿ ಕಾಲೇಜು ಪ್ರವಾಸಿ ಬಸ್, ಟ್ಯಾಂಕರ್-ಲಾರಿಗೆ ಢಿಕ್ಕಿ: ಇಬ್ಬರು ಮೃತ್ಯು, ಹಲವರಿಗೆ ಗಾಯ

ಬಸ್ಸಿನಲ್ಲಿ ಒಟ್ಟು 50 ಮಂದಿ ಪ್ರಯಾಣಿಸುತ್ತಿದ್ದು, ಇವರಲ್ಲಿ 47 ಮಂದಿ ಕಾಲೇಜು ವಿದ್ಯಾರ್ಥಿಗಳಾಗಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಆರು ವಿದ್ಯಾರ್ಥಿಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕುಂದಾಪುರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯದಿಂದ ಹೆಚ್ಚಿನ ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಘಟನೆ ನಡೆದ ಕೂಡಲೇ ಸ್ಥಳೀಯರು ಹಾಗೂ ಗಂಗೊಳ್ಳಿಯ ಆಪದ್ಭಾಂದವ ಅಂಬ್ಯುಲೆನ್ಸ್ ಘಟಕದ ಇಬ್ರಾಹಿಂ ಮತ್ತು ತಂಡದವರು ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಬಸ್ಸಿನೊಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಗ್ಲಾಸ್ ಕಟ್ ಮಾಡುವ ಮೂಲಕ ಹೊರತೆಗೆಯಲಾಯಿತು. ಗ್ಯಾಸ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದಿದ್ದರಿಂದ ಅನಿಲ ಸೋರಿಕೆಯ ಭೀತಿ ಉಂಟಾಗಿತ್ತಾದರೂ, ತಜ್ಞರು ಪರಿಶೀಲಿಸಿದ ನಂತರ ಅಂತಹ ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಿದರು.

 

ಘಟನಾ ಸ್ಥಳಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಕುಟುಂಬದವರಿಗೆ ಮಾಹಿತಿ ರವಾನಿಸಲಾಗಿದೆ.

error: Content is protected !!