ಏ.29: ಶ್ರೀನಿವಾಸ್ ವಿವಿಯಲ್ಲಿ ಅಂತಾರಾಷ್ಟ್ರೀಯ ತಾಂತ್ರಿಕ ಸಮ್ಮೇಳನ: ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಉದ್ಘಾಟನೆ

ಮಂಗಳೂರು: ನಗರದ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (SUIET) ಸಂಸ್ಥೆಯ ವತಿಯಿಂದ ಏಪ್ರಿಲ್ 29 ಮತ್ತು 30 ರಂದು ‘ಹೊಸತಾಗಿ ಮೊಳೆಯುತ್ತಿರುವ ಸಮನ್ವಯ ವಿಜ್ಞಾನ ಮತ್ತು ತಂತ್ರಜ್ಞಾನ’ (ICESST-2026) ಕುರಿತ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಡೀನ್ ಡಾ. ರಾಮಕೃಷ್ಣ ಎನ್. ಹೆಗ್ಡೆ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,  ಈ ಪ್ರತಿಷ್ಠಿತ ಸಮ್ಮೇಳನವನ್ನು ಭಾರತದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ (ISRO) ಮಾಜಿ ಅಧ್ಯಕ್ಷ ಪದ್ಮಶ್ರೀ ಎ. ಎಸ್. ಕಿರಣ್ ಕುಮಾರ್ ಅವರು ಏಪ್ರಿಲ್ 29ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಕ್ಕದ ಶ್ರೀನಿವಾಸ್ ವಿವಿಯ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಚಾನ್ಸೆಲರ್ ಡಾ. ಎ. ಶ್ರೀನಿವಾಸ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಕಾರ್ಯಕ್ರಮದಲ್ಲಿ ಶ್ರೀನಿವಾಸ್ ವಿವಿಯ ಟ್ರಸ್ಟಿಗಳಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಎ. ಮಿತ್ರ ಎಸ್. ರಾವ್, ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಹಾಗೂ ಐಇಇಇ (IEEE) ಮಂಗಳೂರು ವಿಭಾಗದ ಅಧ್ಯಕ್ಷ ಡಾ. ವೇಣುಗೋಪಾಲ ಪಿ. ಎಸ್. ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಸಮ್ಮೇಳನದ ಸಂಚಾಲಕರಾಗಿ ಪ್ರೊ. ಗೌರವ್ ಪ್ರಸಾದ್ ಸಹಕರಿಸಲಿದ್ದಾರೆ ಎಂದು ಡಾ. ರಾಮಕೃಷ್ಣ ಎನ್. ಹೆಗ್ಡೆ ತಿಳಿಸಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯವು ಕಳೆದ ಹಲವಾರು ವರ್ಷಗಳಿಂದ ಸತತವಾಗಿ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದ್ದರೂ, ಈ ಬಾರಿ ವಿಶೇಷವಾಗಿ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (IEEE) ಬೆಂಗಳೂರು ಮತ್ತು ಮಂಗಳೂರು ವಿಭಾಗಗಳ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಜಾಗತಿಕ ಮಟ್ಟದ ಈ ಸಮ್ಮೇಳನವು ಸಂಶೋಧಕರಿಗೆ, ಶೈಕ್ಷಣಿಕ ವಲಯದ ಸಾಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಮೂಲ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಲು ಹಾಗೂ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಸವಾಲುಗಳ ಕುರಿತು ಚರ್ಚಿಸಲು ಒಂದು ಅತ್ಯುತ್ತಮ ವೇದಿಕೆಯನ್ನು ಒದಗಿಸಲಿದೆ ಎಂದು ಡಾ. ರಾಮಕೃಷ್ಣ ಎನ್. ಹೆಗ್ಡೆ ಈ ಸಂದರ್ಭದಲ್ಲಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಾಮ ನರಸಿಂಹ ಹಾಗೂ ಸಮ್ಮೇಳನದ ಸಂಚಾಲಕ ಪ್ರೊ. ಗೌರವ್ ಪ್ರಸಾದ್ ಉಪಸ್ಥಿತರಿದ್ದರು.

error: Content is protected !!