
ಉಡುಪಿ: ಜನದಟ್ಟಣೆ ಇರುವ ವೇಳೆ ಮುಖ್ಯರಸ್ತೆಗೆ ಬೃಹತ್ ಮರವೊಂದು ಏಕಾಏಕಿ ಉರುಳಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಹಾವಂಜೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಇಂದು(ಏ.27) ಬೆಳಿಗ್ಗೆ ಸಂಭವಿಸಿದೆ.

ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸ್ಥಳೀಯ ನಿವಾಸಿಯಾಗಿರುವ ದೇವರಾಜ್ ಅವರು ಇಂದು ಬೆಳಿಗ್ಗೆ ಎಂದಿನಂತೆ ತಮ್ಮ ಕಾರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದರು. ಗೋಳಿಕಟ್ಟೆ ಬಳಿ ತಲುಪುತ್ತಿದ್ದಂತೆ ರಸ್ತೆ ಬದಿಯ ಬೃಹತ್ ಮರವು ಅನಿರೀಕ್ಷಿತವಾಗಿ ಕಾರಿನ ಮೇಲೆಯೇ ಕುಸಿದು ಬಿದ್ದಿದೆ. ಈ ವೇಳೆ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ದೇವರಾಜ್ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಮರ ಬಿದ್ದ ಸ್ಥಳದ ಪಕ್ಕದಲ್ಲೇ ಬಸ್ ನಿಲ್ದಾಣವಿದ್ದು, ಸದಾ ಕಾಲ ವಾಹನ ಸಂಚಾರ ಹಾಗೂ ಜನರ ಓಡಾಟದಿಂದ ಕೂಡಿರುತ್ತದೆ. ಒಂದು ವೇಳೆ ಮರ ಬಸ್ ನಿಲ್ದಾಣದ ಮೇಲೆ ಅಥವಾ ಜನನಿಬಿಡ ಭಾಗಕ್ಕೆ ಬಿದ್ದಿದ್ದರೆ ಭಾರಿ ಸಾವು-ನೋವು ಸಂಭವಿಸುವ ಸಾಧ್ಯತೆಯಿತ್ತು.

ಸ್ಥಳದಲ್ಲಿ ವೀರ ಕಲ್ಕುಡ ದೈವದ ಗುಡಿ ಇದ್ದು, ದೈವದ ಕೃಪೆಯಿಂದಲೇ ಇಂದು ದೊಡ್ಡ ಗಂಡಾಂತರ ತಪ್ಪಿದೆ” ಎಂದು ಅಧಿಕಾರಿ ದೇವರಾಜ್ ಅವರು ತಿಳಿಸಿದ್ದಾರೆ.