1ನೇ ತರಗತಿಗೆ ವಯೋಮಿತಿ ಸಡಿಲಿಕೆ, ಪ್ರಾಥಮಿಕ ಪೂರ್ವ ತರಗತಿಗಳಿಗೇಕೆ ಅಸ್ಪಷ್ಟತೆ?- ಪೋಷಕರಿಗೆ ಗೊಂದಲ

ಉಡುಪಿ: ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ದಿನ ಗಣನೆ ಆರಂಭವಾಗಿದೆ. ಪ್ರಾಥಮಿಕ ಪೂರ್ವ ತರಗತಿಗಳಿಗೆ (ಎಲ್‌ಕೆಜಿ)ಗೆ ದಾಖಲಾಗುವ ಮಕ್ಕಳ ವಯೋಮಿತಿ ಬಗ್ಗೆ ಸರಕಾರ ಇದೀಗ ಸ್ಪಷ್ಟತೆ ನೀಡಿದ್ದು, 2026-27ನೇ ಸಾಲಿಗೆ ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ಆಗಿರಲೇಬೇಕು ಎಂಬ ನಿಯಮವನ್ನು ತುಸು ಸಡಿಲಿಸಿ, 5 ವರ್ಷ 10 ತಿಂಗಳು ನಿಗದಿ ಮಾಡಲಾಗಿದೆ.

2025ರಲ್ಲಿ ಒಂದನೇ ತರಗತಿಗೆ ಸೇರಿಸಲು ವಯೋಮಿತಿಯ ಸಡಿಲಿಕೆ ನೀಡಿದ್ದು, ಅನೇಕರು ಮಕ್ಕಳನ್ನು ಅದೇ ಮಾನದಂಡದಲ್ಲಿ ಎಲ್‌ಕೆಜಿಗೆ ಸೇರಿಸಿದ್ದರು. ಆದರೆ ಸರಕಾರದಿಂದ ಯಾವುದೇ ಸ್ಪಷ್ಟ ಆದೇಶ ಬಾರದ ಕಾರಣ ಅವರನ್ನು ಯುಕೆಜಿಗೆ ಸೇರಿಸುವ ಬಗ್ಗೆ ಗೊಂದಲ ಮುಂದುವರಿದಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಅನೇಕ ಸರಕಾರಿ ಶಾಲೆಗಳಲ್ಲಿ 3 ವರ್ಷ 10 ತಿಂಗಳು ತುಂಬಿರುವ ಮಕ್ಕಳನ್ನು ಎಲ್‌ಕೆಜಿಗೆ ಹಾಗೂ 4 ವರ್ಷ 10 ತಿಂಗಳು ಆಗಿರುವ ಮಕ್ಕಳನ್ನು ಯುಕೆಜಿಗೆ ದಾಖಲಿಸಿಕೊಳ್ಳುತ್ತಿದ್ದಾರೆ. ಆದರೆ ಈ ಮಕ್ಕಳ ಮಾಹಿತಿಯನ್ನು ಸ್ಟ್ಯಾಟ್‌ನಲ್ಲಿ ಅಪ್‌ಡೇಟ್‌ ಮಾಡಲು ಆಗುತ್ತಿಲ್ಲ. ಸ್ಟ್ಯಾಟ್‌ ಸಾಫ್ಟ್‌ವೇರ್‌ನಲ್ಲಿ ಇದಕ್ಕೆ ಅವಕಾಶ ನೀಡದಿರುವುದು ಕಾರಣ. ಅನೇಕ ಖಾಸಗಿ ಶಾಲೆಗಳು ಮಕ್ಕಳನ್ನು ಒಂದನೇ ತರಗತಿಯ ವಯೋಮಿತಿ ಸಡಿಲಿಕೆಯ ಆಧಾರದಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿವೆ.

ಮೇ 29ಕ್ಕೆ 2026-27ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದ್ದು, ಬಹುತೇಕ ಶಾಲೆಗಳು ದಾಖಲಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಿವೆ. ಆದ್ದರಿಂದ ಸರಕಾರ ಕೂಡಲೇ ಪ್ರಾಥಮಿಕಪೂರ್ವ ತರಗತಿಗಳ ದಾಖಲಾತಿಯ ವಯೋಮಿತಿಯನ್ನು ನಿಗದಿ ಮಾಡಿ ಗೊಂದಲ ನಿವಾರಣೆ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

1ನೇ ತರಗತಿಗೆ 5 ವರ್ಷ 10 ತಿಂಗಳು ಆದ ಮಕ್ಕಳನ್ನು ಸೇರಿಸಲು ಅವಕಾಶವಿದೆ. ಪ್ರಾಥಮಿಕಪೂರ್ವ ತರಗತಿಗಳ ದಾಖಲಾತಿಗೂ ಇದೇ ನಿಯಮಾನುಸಾರ ಆದೇಶ ಬರುವ ನಿರೀಕ್ಷೆ ಇದೆ.

error: Content is protected !!