ಪಡುಬಿದ್ರಿ: ಬೈಕ್ ಕಳ್ಳತನ ಪ್ರಕರಣದ ಆರೋಪಿ ಬಂಧನ; ವಾಹನ ವಶ

ಪಡುಬಿದ್ರಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪಡುಬಿದ್ರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದ ನಿವಾಸಿ ಮಂಜುನಾಥ ಫಕೀರಪ್ಪ ವಾಲಿಕಾರ ಬಂಧಿತ ಆರೋಪಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ: ಕಳೆದ ಏಪ್ರಿಲ್ 18ರಂದು ಪಡುಬಿದ್ರಿ ಶ್ರೀನಾರಾಯಣ ಗುರು ಮಂದಿರದ ಬಳಿ ಮುಲ್ಕಿ ಕಾರ್ನಾಡು ನಿವಾಸಿ ವಾಸುದೇವ ಶೆಟ್ಟಿಗಾರ್ ಎಂಬವರು ತಮ್ಮ ಬೈಕ್‌ ಅನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಯು ಬೈಕ್‌ ಅನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು. ಈ ಕುರಿತು ವಾಸುದೇವ ಶೆಟ್ಟಿಗಾರ್ ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯ ಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಪಡುಬಿದ್ರಿ ಠಾಣೆಯ ಎಸ್‌ಐಗಳಾದ ಸಕ್ತಿವೇಲು ಈ. ಮತ್ತು ಅನಿಲ್ ಕುಮಾರ್ ಟಿ. ನಾಯಕ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಬಂಧಿತನಿಂದ ಸುಮಾರು 20,000 ರೂ. ಮೌಲ್ಯದ ಬೈಕ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಎಸ್‌ಐ ರಾಜೇಶ್ ಪಿ., ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಅಶ್ವಿನ್ ಕುಮಾರ್ ಮತ್ತು ಸಂದೇಶ್ ಭಂಡಾರಿ ಪಾಲ್ಗೊಂಡಿದ್ದರು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

error: Content is protected !!