ಸಿಯೋಲ್: ಉತ್ತರ ಕೊರಿಯಾದ ಕಠಿಣ ನಿರ್ಬಂಧಗಳು ಮತ್ತು ಕಣ್ಗಾವಲನ್ನು ಭೇದಿಸಿ ಒಂದು ಇಡೀ ಕುಟುಂಬ ಸಾಗರ ಮಾರ್ಗವಾಗಿ ದಕ್ಷಿಣ ಕೊರಿಯಾಕ್ಕೆ ಪಲಾಯನ ಮಾಡಿದ ರೋಚಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೇ 6, 2023ರ ಮಧ್ಯರಾತ್ರಿ ಒಂಬತ್ತು ಮಂದಿ ಸದಸ್ಯರನ್ನೊಳಗೊಂಡ ಕಿಮ್ ಕುಟುಂಬವು ಸಣ್ಣ ಮೀನುಗಾರಿಕಾ ದೋಣಿಯ ಮೂಲಕ ಹಳದಿ ಸಮುದ್ರವನ್ನು (Yellow Sea) ದಾಟಿ ಅಂತಾರಾಷ್ಟ್ರೀಯ ಗಡಿ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಸಾಹಸಮಯ ಪಯಣದ ಹಿಂದೆ ಹತ್ತು ವರ್ಷಗಳ ಸುದೀರ್ಘ ಯೋಜನೆ ಮತ್ತು ಸಿದ್ಧತೆ ಇತ್ತು ಎಂಬುದು ಈಗ ಬಹಿರಂಗವಾಗಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಈ ಪಲಾಯನದ ರೂವಾರಿಗಳಾದ ಕಿಮ್ ಇಲ್-ಹ್ಯೋಕ್ ಮತ್ತು ಕಿಮ್ ಯಿ-ಹ್ಯೋಕ್ ಸಹೋದರರು ತಮ್ಮ ತಂದೆಯ ಆಸೆಯಂತೆ ಈ ಯೋಜನೆಯನ್ನು ರೂಪಿಸಿದ್ದರು. ಇದಕ್ಕಾಗಿ ಕರಾವಳಿ ಪ್ರದೇಶಕ್ಕೆ ವಾಸ್ತವ್ಯ ಬದಲಿಸಿದ್ದ ಕಿರಿಯ ಸಹೋದರ ಯಿ-ಹ್ಯೋಕ್, ಹತ್ತು ವರ್ಷಗಳ ಕಾಲ ಮೀನುಗಾರನಂತೆ ನಟಿಸುತ್ತಾ ಸಮುದ್ರದ ಹಾದಿ ಮತ್ತು ಭದ್ರತಾ ವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದನು. ಅಷ್ಟೇ ಅಲ್ಲದೆ, ಸ್ಥಳೀಯ ಭದ್ರತಾ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಅವರೊಂದಿಗೆ ವಿಶ್ವಾಸ ಬೆಳೆಸಿಕೊಂಡಿದ್ದನು. ಪಲಾಯನ ಮಾಡುವ ದಿನ ಇವರು ತಮ್ಮ ತಂದೆಯ ಚಿತಾಭಸ್ಮವನ್ನೂ ದೋಣಿಯಲ್ಲಿ ಜೊತೆಯಲ್ಲೇ ಹೊತ್ತು ತಂದಿದ್ದರು.

ಸಾವಿನ ಅಲೆಗಳ ನಡುವೆ ಮಕ್ಕಳೊಂದಿಗೆ ಪಯಣ:
ಪಲಾಯನದ ದಿನದಂದು ಬಿರುಗಾಳಿ ಸಹಿತ ಮಳೆಯಿದ್ದ ಕಾರಣ ರೇಡಾರ್‌ಗಳ ಕಣ್ಣು ತಪ್ಪಿಸಲು ಇವರಿಗೆ ಸಾಧ್ಯವಾಯಿತು. ತಂಡದಲ್ಲಿದ್ದ ಐದು ತಿಂಗಳ ಗರ್ಭಿಣಿ ಮತ್ತು 4 ಹಾಗೂ 6 ವರ್ಷದ ಪುಟ್ಟ ಮಕ್ಕಳನ್ನು ಪತ್ತೆಯಾಗದಂತೆ ಗೋಣಿ ಚೀಲಗಳಲ್ಲಿ ಬಚ್ಚಿಟ್ಟು, ಸದ್ದಿಲ್ಲದೆ ದೋಣಿಯಲ್ಲಿ ಕೂರಿಸಲಾಗಿತ್ತು. ಯಾವುದೇ ಕ್ಷಣದಲ್ಲಿ ಉತ್ತರ ಕೊರಿಯಾದ ನೌಕಾಪಡೆಗೆ ಸಿಕ್ಕಿಬಿದ್ದರೆ ಸಾವು ಖಚಿತ ಎಂಬ ಭೀತಿಯಲ್ಲೇ ಈ ಕುಟುಂಬ ದಕ್ಷಿಣ ಕೊರಿಯಾದ ಯೆನ್‌ಪಿಯಾಂಗ್ ದ್ವೀಪವನ್ನು ತಲುಪಿತು. ಅಲ್ಲಿನ ನೌಕಾಪಡೆ ಇವರನ್ನು ರಕ್ಷಿಸಿದಾಗ ಒಂದು ದಶಕದ ಹೋರಾಟಕ್ಕೆ ಜಯ ಸಿಕ್ಕಂತಾಯಿತು.

ದಕ್ಷಿಣ ಕೊರಿಯಾ ತಲುಪಿದ ನಾಲ್ಕು ತಿಂಗಳ ನಂತರ ಇಲ್-ಹ್ಯೋಕ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ, ಈ ಇಡೀ ಕಾರ್ಯಾಚರಣೆಯ ಹಿಂದಿದ್ದ ಕಿರಿಯ ಸಹೋದರ ಕಿಮ್ ಯಿ-ಹ್ಯೋಕ್, ಸ್ವಾತಂತ್ರ್ಯದ ಗಾಳಿಯನ್ನು ಪೂರ್ಣವಾಗಿ ಆಸ್ವಾದಿಸುವ ಮುನ್ನವೇ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಸ್ಕೂಬಾ ಡೈವಿಂಗ್ ಮಾಡುವಾಗ ಸಂಭವಿಸಿದ ದುರಂತದಲ್ಲಿ ಅವರು ಕೊನೆಯುಸಿರೆಳೆದಿದ್ದು, ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ.
ಸದ್ಯಕ್ಕೆ ಕಿಮ್ ಇಲ್-ಹ್ಯೋಕ್ ದಕ್ಷಿಣ ಕೊರಿಯಾದಲ್ಲಿ ಬಾಣಸಿಗನಾಗಿ (Chef) ವೃತ್ತಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ (ಮಾರ್ಚ್ 2026) ಅವರು ಎರಡನೇ ಮಗುವನ್ನು ಸ್ವಾಗತಿಸಿದ್ದು, ತಮ್ಮ ಕುಟುಂಬದ ಈ ಸಾಹಸವನ್ನು ಜಗತ್ತಿನ ಮುಂದೆ ಹಂಚಿಕೊಳ್ಳುತ್ತಿದ್ದಾರೆ. “ಉತ್ತರ ಕೊರಿಯಾದಲ್ಲಿ ಬದುಕುವುದು ಅಸಾಧ್ಯವಾಗಿತ್ತು, ಈಗ ನಾವು ಮುಕ್ತವಾಗಿದ್ದೇವೆ” ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಉತ್ತರ ಕೊರಿಯಾ ಎಂದರೆ ಅದೊಂದು ಜೈಲು. ಅಲ್ಲಿನ ಪ್ರಜೆಗಳಿಗೆ ಸ್ವಾತಂತ್ರ್ಯವಿಲ್ಲ. ಇದೇ ರೀತಿ ಹಲವಾರು ಮಂದಿ ಈ ದೇಶದಿಂದ ಪಲಾಯನ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.