ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಮತ್ತು ತಂಡದಿಂದ ಖಾಸಗಿ ಜಮೀನು ಅತಿಕ್ರಮಣ, ಕಟ್ಟಡ ಧ್ವಂಸ: ಕೋರ್ಟ್ ರಿಸೀವರ್ ಗಂಭೀರ ಆರೋಪ

ಮಂಗಳೂರು: ಪುತ್ತೂರಿನ ಹೃದಯಭಾಗದಲ್ಲಿರುವ ಖಾಸಗಿ ಮಾಲೀಕತ್ವದ ಜಮೀನು ಮತ್ತು ಹಳೆಯ ಕಟ್ಟಡವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅವರ ಬೆಂಬಲಿಗರು ಕಾನೂನು ಬಾಹಿರವಾಗಿ ಅತಿಕ್ರಮಿಸಿ, ಕಟ್ಟಡ ಧ್ವಂಸಗೊಳಿಸಿದ್ದಾರೆ ಎಂದು ಕೋರ್ಟ್ ರಿಸೀವರ್ ಡಾ. ಅರವಿಂದ ರಾವ್ ಕೇದಿಗೆ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿಸ್ತೃತ ಮಾಹಿತಿ ನೀಡಿ, ದಿನಾಂಕ 14-04-2026ರ ತಡರಾತ್ರಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಎದುರಿಗಿರುವ ಹಳೆಯ ಕಟ್ಟಡಕ್ಕೆ ಶಾಸಕ ಅಶೋಕ್ ರೈ, ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಅವರ ಬೆಂಬಲಿಗರು ಜೆಸಿಬಿ ಹಾಗೂ ಟಿಪ್ಪರ್‌ನೊಂದಿಗೆ ನುಗ್ಗಿದ್ದಾರೆ. ನ್ಯಾಯಾಲಯದ ಆದೇಶವಿದೆ ಎಂದು ಸುಳ್ಳು ಹೇಳಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿರಾಲಾ ಬಾರ್‌ನ ಬೀಗ ಮುರಿದು ಸುಮಾರು ಹತ್ತು ಸಾವಿರ ಚದರ ಅಡಿಯಷ್ಟು ಕಟ್ಟಡವನ್ನು ಭಾಗಶಃ ಧ್ವಂಸಗೊಳಿಸಿದ್ದಾರೆ. ಈ ವೇಳೆ ಬೆಲೆಬಾಳುವ ಮರಮುಟ್ಟು ಹಾಗೂ ಸಾಮಗ್ರಿಗಳನ್ನು ಕೊಂಡೊಯ್ದು ಸುಮಾರು 2 ಕೋಟಿ ರೂಪಾಯಿಯಷ್ಟು ನಷ್ಟ ಉಂಟುಮಾಡಿದ್ದಾರೆ ಎಂದು ಕೇದಿಗೆ ವಿವರಿಸಿದರು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಪ್ರಸ್ತುತ ಇರುವ 9.79 ಎಕರೆ ಜಮೀನು ಕೇದಿಗೆ ಕುಟುಂಬದ ಆಸ್ತಿಯಾಗಿದ್ದು, ಈ ಬಗ್ಗೆ ದಶಕಗಳಿಂದ ನ್ಯಾಯಾಲಯದಲ್ಲಿ ಸಿವಿಲ್ ದಾವೆ ನಡೆಯುತ್ತಿದೆ. ಸದ್ಯ ಈ ಆಸ್ತಿಯು ನ್ಯಾಯಾಲಯದ ಅಧೀನದಲ್ಲಿದ್ದು (Court Receiver), ಯಾವುದೇ ಅತಿಕ್ರಮಣ ಮಾಡದಂತೆ ತಡೆಯಾಜ್ಞೆ ಇದೆ. ಹೀಗಿದ್ದರೂ ಶಾಸಕರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ನ್ಯಾಯಾಂಗ ನಿಂದನೆ ಎಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಶಾಸಕರು ಮತ್ತು ಇತರರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.

ದೈವಸ್ಥಾನದ ಹೆಸರಿನಲ್ಲಿ ದಾರಿ ತಪ್ಪಿಸುವ ಯತ್ನ:
ಕೇದಿಗೆ ಕುಟುಂಬವು ಈ ಜಮೀನಿನಲ್ಲಿರುವ ದೈವದ ಕಟ್ಟೆಯನ್ನು 1946ರಿಂದಲೂ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದೆ. ಆದರೆ, ಶಾಸಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ದೈವದ ಹೆಸರಿನಲ್ಲಿ ಖಾಸಗಿ ಆಸ್ತಿಗೆ ಧಕ್ಕೆ ತರುತ್ತಿದ್ದಾರೆ. ಅತಿಕ್ರಮಣದ ವೇಳೆ ಸಾರ್ವಜನಿಕರ ದಾರಿ ತಪ್ಪಿಸಲು ಸುಳ್ಳು ಹಬ್ಬಿಸಲಾಗುತ್ತಿದೆ. ಒಬ್ಬ ಜನಪ್ರತಿನಿಧಿಯಾಗಿ ಕಾನೂನನ್ನು ಗೌರವಿಸಬೇಕಾದ ಶಾಸಕರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಅಕ್ರಮದ ಕುರಿತು ಈಗಾಗಲೇ ಪೊಲೀಸ್ ಇಲಾಖೆ, ನ್ಯಾಯಾಲಯ ಮತ್ತು ಪುತ್ತೂರು ನಗರಸಭೆಯ ಗಮನಕ್ಕೆ ತರಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು ಎಂದು ಡಾ. ಅರವಿಂದ ರಾವ್ ಕೇದಿಗೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಭವಾನಿ ಶಂಕರ್, ಸುಮಿತ್, ಧೀರಜ್ ಹಾಗೂ ಮನೋಜ್ ಉಪಸ್ಥಿತರಿದ್ದರು.

error: Content is protected !!