ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದರೆ, ಈ ತಡೆಯಾಜ್ಞೆಯ ಜೊತೆಗೆ ಸಂತ್ರಸ್ತೆಯ ಜೀವನ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ಷರತ್ತನ್ನು ವಿಧಿಸಿದೆ.

ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಗರ್ಭವತಿ ಮಾಡಿ ವಂಚಿಸಿದ ಆರೋಪ ಕೃಷ್ಣ ಜೆ. ರಾವ್ ಮೇಲಿದೆ. ಈ ಸಂಬಂಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿತು.
ನ್ಯಾಯಾಲಯದ ಕಠಿಣ ಷರತ್ತು:
ಪ್ರಕರಣಕ್ಕೆ ತಡೆ ನೀಡಿದರೂ, ಸಂತ್ರಸ್ತೆ ಮತ್ತು ಮಗುವಿನ ಹಿತದೃಷ್ಟಿಯಿಂದ ನ್ಯಾಯಾಲಯವು ಆರ್ಥಿಕ ನೆರವು ನೀಡುವಂತೆ ಆದೇಶಿಸಿದೆ. “ಅರ್ಜಿದಾರರು ಅಥವಾ ಅವರ ಪೋಷಕರು ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂ. ಹಣವನ್ನು ಪಾವತಿಸಬೇಕು” ಎಂದು ನ್ಯಾಯಪೀಠ ಷರತ್ತು ವಿಧಿಸಿದೆ.
ಒಂದು ವಾರದ ಗಡುವು:
ಆದೇಶದ ಅನ್ವಯ, ಅರ್ಜಿದಾರರು ಮೊದಲ ಕಂತಿನ 75 ಸಾವಿರ ರೂಪಾಯಿಗಳನ್ನು ಮುಂದಿನ ಒಂದು ವಾರದೊಳಗೆ ಸಂತ್ರಸ್ತೆಗೆ ತಲುಪಿಸಬೇಕು. ತದನಂತರ ಪ್ರತಿ ತಿಂಗಳು ಈ ಮೊತ್ತವನ್ನು ಪಾವತಿಸುವುದನ್ನು ಮುಂದುವರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ಈ ಆರ್ಥಿಕ ಷರತ್ತನ್ನು ಪೂರೈಸುವ ವರೆಗೆ ಮಾತ್ರ ಪ್ರಕರಣಕ್ಕೆ ತಡೆ ಅನ್ವಯವಾಗಲಿದೆ ಎಂಬ ಸೂಚನೆ ನೀಡಲಾಗಿದೆ.