625ಕ್ಕೆ 625: ಅಂಕಗಳ ಸಮರದಲ್ಲಿ ಪರ್ಫೆಕ್ಟ್ ಸಾಧನೆ ಮಾಡಿದ ರಾಜ್ಯದ ಏಳು ಪ್ರತಿಭೆಗಳು

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪ್ರಕಟಿಸಿರುವ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅಂಕಗಳ ಮಳೆ ಸುರಿದಿದೆ. ಈ ಬಾರಿ ರಾಜ್ಯಾದ್ಯಂತ ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನವನ್ನು ಅಲಂಕರಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಏಳು ಪ್ರತಿಭೆಗಳು ಶೇ. 100ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಚಿಕ್ಕೋಡಿ ಜಿಲ್ಲೆಯ ಅಥಣಿ ತಾಲೂಕಿನ ಪ್ರಾರ್ಥನಾ ನಾಗಪ್ಪ (ಸಕಾರಿ ಶಾಲೆ), ಉಡುಪಿಯ ಶಂಕರನಾರಾಯಣದ ಪ್ರೀತಂ ಪೂಜಾರಿ, ದಾವಣಗೆರೆಯ ಭರತ್ ಜಿ., ಚಿಕ್ಕಮಗಳೂರಿನ ಬೃಂದಾ ಎಂ., ಬೆಂಗಳೂರು ಉತ್ತರ ಜಿಲ್ಲೆಯ ಧನುಷ್ ಸುಧೀರ್, ವಿಜಯಪುರದ ಸೌಜನ್ಯಾ ಬಸವರಾಜ್ ಹಾಗೂ ರಾಯಚೂರಿನ ಮಾನ್ವಿಯ ಸುಖದೇವ ಅವರು 625ಕ್ಕೆ 625 ಅಂಕ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೂ ಸೇರಿರುವುದು ವಿಶೇಷ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಕೇವಲ ಏಳು ಮಂದಿ ಮಾತ್ರವಲ್ಲದೆ, ಒಂದು ಅಥವಾ ಎರಡು ಅಂಕಗಳ ಅಂತರದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ವಂಚಿತರಾದವರ ಸಂಖ್ಯೆಯೂ ದೊಡ್ಡದಿದೆ. ಒಟ್ಟು 21 ವಿದ್ಯಾರ್ಥಿಗಳು 624 ಅಂಕ ಗಳಿಸಿದರೆ, 28 ವಿದ್ಯಾರ್ಥಿಗಳು 623 ಅಂಕ ಹಾಗೂ 74 ವಿದ್ಯಾರ್ಥಿಗಳು 622 ಅಂಕಗಳನ್ನು ಪಡೆದಿದ್ದಾರೆ. ಈ ಅಂಕಿ-ಅಂಶಗಳು ವಿದ್ಯಾರ್ಥಿಗಳಲ್ಲಿರುವ ಸ್ಪರ್ಧಾತ್ಮಕ ಮನೋಭಾವ ಹಾಗೂ ಶೈಕ್ಷಣಿಕ ಮಟ್ಟದ ಪ್ರಗತಿಯನ್ನು ಎತ್ತಿ ತೋರಿಸುತ್ತಿವೆ.

ಜಿಲ್ಲಾವಾರು ಸಾಧನೆಯಲ್ಲಿ ಕರಾವಳಿ ಜಿಲ್ಲೆಗಳ ಪ್ರಾಬಲ್ಯ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನವನ್ನು ಅಲಂಕರಿಸಿದೆ. ಉಡುಪಿ ಜಿಲ್ಲೆಯು ದ್ವಿತೀಯ ಸ್ಥಾನದಲ್ಲಿದ್ದರೆ, ಉತ್ತರ ಕನ್ನಡ ಜಿಲ್ಲೆಯು ತೃತೀಯ ಸ್ಥಾನ ಪಡೆದುಕೊಂಡಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯು ಈ ಬಾರಿ ಫಲಿತಾಂಶ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

ರಾಜ್ಯದ ಒಟ್ಟಾರೆ ತೇರ್ಗಡೆ ಪ್ರಮಾಣ ಈ ಬಾರಿ ಶೇ. 94.10 ರಷ್ಟಾಗಿದ್ದು, ಇದು ಕಳೆದ ಸಾಲಿಗಿಂತ ಉತ್ತಮ ಪ್ರಗತಿಯಾಗಿದೆ. ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯ ಉನ್ನತ ಮಟ್ಟದತ್ತ ಸಾಗುತ್ತಿರುವುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ. ಸಾಧನೆ ಮಾಡಿದ ಎಲ್ಲಾ ಟಾಪರ್ಸ್‌ಗಳಿಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

error: Content is protected !!