ಮಂಗಳೂರು: ಹೆದ್ದಾರಿಗೆ ಟೈಲ್ಸ್‌: ನೋ ಪಾರ್ಕಿಂಗ್‌ ಸ್ಥಳದಲ್ಲಿಯೇ ವಾಹನಗಳ ಯದ್ವಾತದ್ವಾ ಪಾರ್ಕಿಂಗ್-‌ ಮನಪಾ ರೂಲ್ಸ್ ಗೆ ಇಲ್ಲಿ ಡೋಂಟ್‌ ಕೇರ್!!

ಮಂಗಳೂರು: ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನ ಹೃದಯಭಾಗದಲ್ಲೇ ಕಾನೂನುಗಳು ಹೇಗೆ ಗಾಳಿಗೆ ತೂರಲ್ಪಡುತ್ತಿವೆ ಇದೇ ಸಾಕ್ಷಿ. ಮಂಗಳೂರಿನ ಹೃದಯ ಭಾಗ ಎಂದೇ ಬಿಂಬಿತವಾದ ಜ್ಯೋತಿ ಸರ್ಕಲ್ ಬಲ್ಮಟ ರೋಡಿನಲ್ಲಿರುವ ಜ್ಯೂಸ್ ಮಳಿಗೆಯೊಂದು ಕಾನೂನು-ನಿಯಮಗಳನ್ನೇ ಗಾಳಿಗೆ ತೂರಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ.

ಯಾಕೆಂದರೆ ಇಲ್ಲಿನ ಸರ್ಕಾರಿ ಜಾಗವನ್ನು ಕುಟುಂಬದ ಆಸ್ತಿಯಂತೆ ಭಾವಿಸಿರುವ ಈ ಮಳಿಗೆಯವರು, ಫುಟ್‌ಪಾತ್ ಅತಿಕ್ರಮಿಸಿ ಹೆದ್ದಾರಿಯವರೆಗೂ ಟೈಲ್ಸ್ ಹಾಕಿದ್ದಾರೆ. ಬಂಟ್ಸ್‌ ಹಾಸ್ಟೆಲ್‌ನಿಂದ ಘನ ವಾಹನಗಳು ಪ್ರವೇಶಿಸದ ಚಿಕ್ಕ ವಾಹನಗಳಷ್ಟೇ ಸಂಚರಿಸುವ ಅಗಲ ಕಿರಿದಾದ ರಸ್ತೆ ಹಾಗೂ ಜ್ಯೋತಿ ಬಲ್ಮಠದ ನಾಲ್ಕು ರಸ್ತೆಗಳು ಸೇರುವ ಸದಾ ವಾಹನಗಳಿಂದ ಗಿಜಿಗುಡುತ್ತಿರುವ ರಸ್ತೆಯಲ್ಲಿಯೇ ಈ ಅಪಸವ್ಯ ನಡೆಯುತ್ತಿದೆ. ಸಾರ್ವಜನಿಕರು ನಡೆಯಬೇಕಾದ, ವಾಹನಗಳು ಸಂಚರಿಸಬೇಕಾದ ಜಾಗವನ್ನೇ ಇವರು ನುಂಗಿ ನೀರು ಕುಡಿಯುತ್ತಿದ್ದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಕುಂಭಕರ್ಣ ನಿದ್ದೆಗೆ ಜಾರಿದ್ದಾರೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಈ ಮಳಿಗೆಯ ಮುಂಭಾಗದಲ್ಲಿ ʻನೋ ಪಾರ್ಕಿಂಗ್’ ಫಲಕವಿದ್ದರೂ, ಅದಕ್ಕೆ ಕಿಂಚಿತ್ತೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಗ್ರಾಹಕರು ತಮ್ಮ ಐಷಾರಾಮಿ ಕಾರುಗಳನ್ನು ರಸ್ತೆಯ ಮಧ್ಯೆಯೇ ನಿಲ್ಲಿಸಿ ಜ್ಯೂಸ್ ಹೀರಲು ಮಳಿಗೆಯವರೇ ಪ್ರಚೋದನೆ ನೀಡುತ್ತಿದ್ದಾರೆ. ಕಾರಿನ ಗಾಜಿನ ಬಳಿಗೇ ಹೋಗಿ ಜ್ಯೂಸ್ ಸಪ್ಲೈ ಮಾಡುವ ಈ ವ್ಯವಹಾರದಿಂದಾಗಿ, ಈಗಾಗಲೇ ಕಿರಿದಾಗಿರುವ ಬಲ್ಮಠ ರಸ್ತೆಯಲ್ಲಿ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದರೂ, ಜನರ ಪ್ರಾಣಕ್ಕಿಂತ ಈ ವ್ಯಾಪಾರವೇ ಅಧಿಕಾರಿಗಳಿಗೆ ದೊಡ್ಡದಾಯಿತೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಬಡವರ ಗೂಡಂಗಡಿಗೆ ಬುಲ್ಡೋಜರ್, ಶ್ರೀಮಂತರ ಅಕ್ರಮಕ್ಕೆ ಹೂವಿನ ಹಾರವೇ?
ಬೀದಿಬದಿಯಲ್ಲಿ ಜೀವನೋಪಾಯಕ್ಕಾಗಿ ಪುಟ್ಟ ಗೂಡಂಗಡಿ ಇಟ್ಟುಕೊಂಡಿರುವ ಬಡವರ ಮೇಲೆ ಯುದ್ಧ ಸಾರುವ ಮನಪಾ ಅಧಿಕಾರಿಗಳೇ, ಈ ದೈತ್ಯ ಕಟ್ಟಡದ ಅಕ್ರಮ ನಿಮಗೆ ಕಾಣಿಸುತ್ತಿಲ್ಲವೇ? ಬಡವನ ಹೊಟ್ಟೆಗೆ ಹೊಡೆಯಲು ಕ್ಷಣಾರ್ಧದಲ್ಲಿ ಬುಲ್ಡೋಜರ್ ತರುವ ಪಾಲಿಕೆ, ಸಾರ್ವಜನಿಕ ರಸ್ತೆಯನ್ನೇ ಅತಿಕ್ರಮಿಸಿ ಟೈಲ್ಸ್ ಹಾಕಿರುವ ಈ ಶ್ರೀಮಂತ ಉದ್ಯಮಿಯ ಮುಂದೆ ಮಂಡಿಯೂರಿ ಕುಳಿತಿದೆಯೇ? ಇದು ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ರಿಯಾಯಿತಿ ನೀಡುವ ಮಂಗಳೂರು ಮಹಾನಗರ ಪಾಲಿಕೆಯ ದ್ವಂದ್ವ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಪಾದಿಸುತ್ತಿದ್ದಾರೆ.

ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ ವ್ಯವಸ್ಥೆ?:
ಹಲವು ಸಮಯಗಳಿಂದ ಈ ಅಕ್ರಮ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಮಳಿಗೆಯವರು ಮುಂದೆ ಹೆದ್ದಾರಿಯನ್ನೇ ನುಂಗಿ ಕಟ್ಟಡ ವಿಸ್ತರಿಸುವ ಹಂತಕ್ಕೆ ಹೋದರೂ ಆಶ್ಚರ್ಯವಿಲ್ಲ. ಮಂಗಳೂರಿನ ನಾಗರಿಕರು ಈ ಅನ್ಯಾಯದ ವಿರುದ್ಧ ಆಕ್ರೋಶಗೊಂಡಿದ್ದು, ಇನ್ನಾದರೂ ಮನಪಾ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ಈ ಜ್ಯೂಸ್ ಮಳಿಗೆಯ ವಿರುದ್ಧ ಕಠಿಣ ಕ್ರಮ ಕೈಗೊಂಡು ಫುಟ್‌ಪಾತ್ ಮುಕ್ತಗೊಳಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.

error: Content is protected !!