ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಶನ್ ವತಿಯಿಂದ ʻಸೇವಾ ಸಂಭ್ರಮ’: ಏ. 25ರಂದು ಮನೆಗಳ ಹಸ್ತಾಂತರ

ಮಂಗಳೂರು: ಬಡವರ ಕಣ್ಣೀರು ಒರೆಸುವ ಸಂಕಲ್ಪದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಶನ್ ವತಿಯಿಂದ ನಿರ್ಮಿಸಲಾದ 14ನೇ ಮತ್ತು 15ನೇ ಮನೆಗಳ ಹಸ್ತಾಂತರ ಹಾಗೂ ʻಸೇವಾ ಸಂಭ್ರಮ’ ಕಾರ್ಯಕ್ರಮವು ಇದೇ ಏಪ್ರಿಲ್ 25ರಂದು ಸಂಜೆ 6:00 ಗಂಟೆಗೆ ಬಂಟ್ವಾಳದ ಪಂಬದಬೆಟ್ಟು ಬ್ರಹ್ಮರಕೂಟ್ಲು ಟೋಲ್‌ಗೇಟ್‌ ಬಳಿಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ನಂದಾದೀಪ ಫೌಂಡೇಶನ್‌ ಮಂಗಳೂರಿನ ಸ್ಥಾಪಕ ಸದಾನಂದ ಪೂಜಾರಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 13 ಮನೆಗಳನ್ನು ಕಟ್ಟಿ ಹಸ್ತಾಂತರಿಸಿರುವ ಹೆಮ್ಮೆ ನಮ್ಮ ಸಂಘಟನೆಗಿದೆ. ಇದೀಗ 14 ಮತ್ತು 15ನೇ ಮನೆಗಳ ಹಸ್ತಾಂತರಕ್ಕೆ ವೇದಿಕೆ ಸಿದ್ಧಗೊಂಡಿದೆ. ಈ ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ ಮತ್ತು ಚಲನಚಿತ್ರ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಅಲ್ಲದೆ, ಸಂಜೆ 8:00 ಗಂಟೆಯಿಂದ ಪ್ರಕಾಶ್ ಮಹದೇವನ್, ರೂಪಾ ಪ್ರಕಾಶ್ ಸೇರಿದಂತೆ ಖ್ಯಾತ ಗಾಯಕರ ತಂಡದಿಂದ ‘ಮ್ಯೂಸಿಕಲ್ ಸ್ಟಾರ್ ನೈಟ್’ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳಿಗೆ ಪೂರಕವಾಗಿ ಆರಂಭವಾದ ಬಿಲ್ಲವ ಬ್ರಿಗೇಡ್, ಸಮಾಜದ ಬಡವರ ಧ್ವನಿಯಾಗಿ ಬೆಳೆದಿದೆ. ಆರ್ಥಿಕ ಸಂಕಷ್ಟದಲ್ಲಿ ಅರ್ಧಕ್ಕೆ ನಿಂತ ಮನೆಗಳನ್ನು ಪೂರ್ಣಗೊಳಿಸಿ ಸೂರು ನೀಡುವುದರ ಜೊತೆಗೆ, ಬಡ ವಿದ್ಯಾರ್ಥಿಗಳಿಗೆ ಅಮೇರಿಕಾ, ಲಂಡನ್, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ 4500ಕ್ಕೂ ಅಧಿಕ ಕಿಟ್ ವಿತರಣೆ ಮತ್ತು 800 ಯುನಿಟ್‌ಗೂ ಅಧಿಕ ರಕ್ತದಾನ ಮಾಡುವ ಮೂಲಕ ಸಂಘಟನೆಯು ಮಾನವೀಯತೆ ಮೆರೆದಿದೆ.

ಸಮಾಜ ಸೇವೆಯ ಜೊತೆಗೆ ಪ್ರಾದೇಶಿಕ ಹಿತಾಸಕ್ತಿಗಾಗಿಯೂ ಬಿಲ್ಲವ ಬ್ರಿಗೇಡ್ ಶ್ರಮಿಸುತ್ತಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ಹೆಸರಿಡುವ ನಿಟ್ಟಿನಲ್ಲಿ ಬೃಹತ್ ಪ್ರತಿಭಟನಾ ಜಾಥಾವನ್ನು ಸಂಘಟಿಸಲಾಗಿತ್ತು. ಮೂಲ್ಕಿ ಹಳೆಯಂಗಡಿಯಲ್ಲಿ ‘ಜಾಗತಿಕ ಬಿಲ್ಲವ ಕ್ರೀಡಾಕೂಟ’ ಹಾಗೂ ‘ಯುವ ದಸರಾ’ ಅಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಸಂಘಟನೆಯು ಯುವ ಸಮುದಾಯವನ್ನು ಒಗ್ಗೂಡಿಸುತ್ತಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಬ್ರಿಗೇಡ್ ಸ್ಥಾಪಕ ಸದಸ್ಯರಾದ ಅನ್ವಿತ್ ಕಟೀಲ್, ಪ್ರಶಾಂತ್ ಮಂಗಳಾದೇವಿ, ಕಾರ್ಯಾಧ್ಯಕ್ಷ ನಿಶಾನ್ ಪೂಜಾರಿ, ಸಜಿಪ ಮೂಡ ಬಾಲಗಣಪತಿ ದೇವಸ್ಥಾನದ ಮೊಕ್ತೇಸರ ಯಶವಂತ ದೇರಾಜೆ ಮತ್ತು ನಾರಾಯಣ ಗುರು ಯುವ ವೇದಿಕೆಯ ಸುಧಾಕರ ಕರ್ಕೇರ ಉಪಸ್ಥಿತರಿದ್ದರು.

error: Content is protected !!