ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶ ಹೊರಬಿದ್ದಿದೆ. ಈ ಬಾರಿಯ ಫಲಿತಾಂಶದಲ್ಲಿ ಕರಾವಳಿಯ ಶೈಕ್ಷಣಿಕ ಜಿಲ್ಲೆ ದಕ್ಷಿಣ ಕನ್ನಡ ಶೇ. 98.40 ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದೆ. ಶೇ 98.18 ಸಾಧನೆಯೊಂದಿಗೆ ಉಡುಪಿ ದ್ವಿತೀಯ ಸ್ಥಾನ ಪಡೆದಿದೆ.

625ಕ್ಕೆ 625 ಅಂಕ ಪಡೆದ ಸಾಧಕರು:
ಈ ವರ್ಷದ ಪರೀಕ್ಷೆಯಲ್ಲಿ ಒಟ್ಟು ಏಳು ವಿದ್ಯಾರ್ಥಿಗಳು ಪೂರ್ಣಾಂಕ (625ಕ್ಕೆ 625) ಪಡೆಯುವ ಮೂಲಕ ರಾಜ್ಯಕ್ಕೆ ಜಂಟಿ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ.
ಭರತ್ (ದಾವಣಗೆರೆ), ಸುಖದೇವ್ (ರಾಯಚೂರು), ಪ್ರಾರ್ಥನಾ (ಚಿಕ್ಕೋಡಿ), ಬೃಂದಾ (ಚಿಕ್ಕಮಗಳೂರು), ಪ್ರೀತಂ (ಉಡುಪಿ), ಸೌಜನ್ಯ (ವಿಜಯಪುರ) ಮತ್ತು ಧನುಷ್ (ಬೆಂಗಳೂರು ಉತ್ತರ) ಪ್ರಥಂ ಸ್ಥಾನ ಗಳಿಸಿದ್ದಾರೆ.

ಟಾಪ್ 5 ಜಿಲ್ಲೆಗಳ ಪಟ್ಟಿ:
ಫಲಿತಾಂಶದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳು ಮೇಲುಗೈ ಸಾಧಿಸಿವೆ:
ದಕ್ಷಿಣ ಕನ್ನಡ: ಶೇ. 98.40 (ಪ್ರಥಮ)
ಉಡುಪಿ: ಶೇ. 98.18 (ದ್ವಿತೀಯ)
ಉತ್ತರ ಕನ್ನಡ: ಶೇ. 98.02 (ತೃತೀಯ)
ಹಾಸನ: ಶೇ. 97.51 (ನಾಲ್ಕನೇ ಸ್ಥಾನ)
ಮಂಡ್ಯ: ಶೇ. 97.4 (ಐದನೇ ಸ್ಥಾನ)

ಗಣನೀಯ ಪ್ರಗತಿ: ಬಂಗಾರಪ್ಪ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಮಕ್ಕಳೇ ಈ ಬಾರಿ ಅತಿ ಹೆಚ್ಚು ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 92ರಷ್ಟು ಫಲಿತಾಂಶ ಬಂದಿದೆ,” ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ. 91ರಷ್ಟು ಫಲಿತಾಂಶ ದಾಖಲಾಗುವ ಮೂಲಕ ಗಣನೀಯ ಪ್ರಗತಿ ಕಂಡುಬಂದಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿ ಮಂಡಳಿಯು ವಿಶೇಷ ಕ್ರಮ ಕೈಗೊಂಡಿದ್ದು, ಫಲಿತಾಂಶ ಪ್ರಕಟವಾದ ತಕ್ಷಣವೇ ‘ಡಿಜಿಲಾಕರ್’ (DigiLocker) ನಲ್ಲಿ ಅಧಿಕೃತ ಅಂಕಪಟ್ಟಿಗಳನ್ನು ಲಭ್ಯವಾಗುವಂತೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹೈಕೋರ್ಟ್ ಆದೇಶದಂತೆ ಈ ಬಾರಿಯೂ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ಬದಲಾಗಿ ಅಂಕಗಳನ್ನೇ ನೀಡಲಾಗಿದೆ. ಒಟ್ಟು 625 ಅಂಕಗಳಿಗೆ ಫಲಿತಾಂಶ ಪ್ರಕಟವಾಗಿದ್ದು, ತೃತೀಯ ಭಾಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಅಥವಾ KarnatakaOne ಮೊಬೈಲ್ ಆಪ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.