ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ‘ಶೇರು ಮಾರುಕಟ್ಟೆ ಹಗರಣ’ಕ್ಕೆ ಸಂಬಂಧಿಸಿದಂತೆ ಜೆನ್‌ಜೀಗಳಿಂದಲೇ ಗೆದ್ದುಬಂದಿದ್ದ ದೇಶದ ಗೃಹ ಸಚಿವ ಸುಧಾನ್ ಗುರುಂಗ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮನಿ ಲಾಂಡರಿಂಗ್ ಆರೋಪ ಎದುರಿಸುತ್ತಿರುವ ವಿವಾದಿತ ಉದ್ಯಮಿಯೊಬ್ಬರ ಜೊತೆ ಶೇರು ವಹಿವಾಟು ನಡೆಸಿದ್ದಾರೆ ಎಂಬ ಗಂಭೀರ ಆರೋಪ ಇವರ ಮೇಲೆ ಕೇಳಿಬಂದಿತ್ತು.

ತಮ್ಮ ರಾಜೀನಾಮೆಯನ್ನು ಪ್ರಧಾನಿ ಬಾಳೇಂದ್ರ ಶಾ (ಬಾಲೆನ್) ಅವರಿಗೆ ಸಲ್ಲಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಗುರುಂಗ್, “ನನಗೆ ಸ್ಥಾನಮಾನಕ್ಕಿಂತ ನೈತಿಕತೆ ಮುಖ್ಯ. ಸಾರ್ವಜನಿಕರ ವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ,” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. “ಇತ್ತೀಚಿನ ದಿನಗಳಲ್ಲಿ ನನ್ನ ಶೇರು ಹೂಡಿಕೆಯ ಬಗ್ಗೆ ನಾಗರಿಕರು ಕೇಳುತ್ತಿರುವ ಪ್ರಶ್ನೆಗಳನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ತನಿಖೆಯ ವೇಳೆ ಹಿತಾಸಕ್ತಿ ಸಂಘರ್ಷ ಉಂಟಾಗಬಾರದು ಎಂಬ ಕಾರಣಕ್ಕೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಜೆನ್-ಜಿ ಪ್ರತಿಭಟನೆಯ ಕಿಡಿ
ಸುಧಾನ್ ಗುರುಂಗ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ‘ಜೆನ್-ಜಿ’ (Gen-Z) ಯುವ ಚಳವಳಿಯ ಮೂಲಕ ಮುಂಚೂಣಿಗೆ ಬಂದ ನಾಯಕ. ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿದ್ದ ಈ ಯುವಪಡೆ, ಮಾರ್ಚ್ 5 ರಂದು ನಡೆದ ಚುನಾವಣೆಯಲ್ಲಿ ದೊಡ್ಡ ಜಯ ಸಾಧಿಸಿತ್ತು. ಗೋರ್ಖಾ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದ ಗುರುಂಗ್, ಅತ್ಯಂತ ಕಿರಿಯ ವಯಸ್ಸಿನಲ್ಲೇ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡು ಇತಿಹಾಸ ಸೃಷ್ಟಿಸಿದ್ದರು.

ತಮ್ಮ ರಾಜೀನಾಮೆ ಪತ್ರದಲ್ಲಿ ಚಳವಳಿಯ ದಿನಗಳನ್ನು ಸ್ಮರಿಸಿರುವ ಅವರು, “ನನ್ನ 46 ಸಹೋದರ-ಸಹೋದರಿಯರ ರಕ್ತ ಮತ್ತು ಬಲಿದಾನದ ಮೇಲೆ ಈ ಸರ್ಕಾರ ರಚನೆಯಾಗಿದೆ. ಇಂತಹ ಸರ್ಕಾರದ ಪಾರದರ್ಶಕತೆಯ ಬಗ್ಗೆ ಯಾರಾದರೂ ಪ್ರಶ್ನೆ ಎತ್ತಿದರೆ, ಅದಕ್ಕೆ ನೈತಿಕತೆಯೇ ನನ್ನ ಉತ್ತರ,” ಎಂದಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಅವಕಾಶ ಮಾಡಿಕೊಡಲು ತಾವು ಅಧಿಕಾರದಿಂದ ಕೆಳಗಿಳಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ರಾಜಕೀಯ ಭವಿಷ್ಯಕ್ಕೆ ಕುತ್ತು?
ನೇಪಾಳದಲ್ಲಿ ‘ಬಾಲೆನ್ ಅಲೆ’ಯ ಮೂಲಕ ಅಧಿಕಾರಕ್ಕೆ ಬಂದಿದ್ದ ಈ ಹೊಸ ತಲೆಮಾರಿನ ನಾಯಕರಲ್ಲಿ ಸುಧಾನ್ ಗುರುಂಗ್ ಪ್ರಮುಖರಾಗಿದ್ದರು. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಉದ್ಯಮಿಗಳ ಜೊತೆಗಿನ ನಂಟು ಬಯಲಾಗಿರುವುದು ಅವರ ರಾಜಕೀಯ ಭವಿಷ್ಯದ ಮೇಲೆ ಕರಿನೆರಳು ಬೀರಿದೆ. ತನಿಖೆಯಲ್ಲಿ ಅವರು ಕ್ಲೀನ್ ಚಿಟ್ ಪಡೆಯುತ್ತಾರೆಯೇ ಅಥವಾ ಈ ಹಗರಣ ಹೊಸ ರಾಜಕೀಯ ತಿರುವು ಪಡೆಯಲಿದೆಯೇ ಎಂಬುದನ್ನು ಕಾದುನೋಡಬೇಕು.