ಕೊಲೊರಾಡೋ: ಅತೀಂದ್ರಿಯ ಶಕ್ತಿಗಳು ಹಾಗೂ ಏಲಿಯನ್(ಅನ್ಯಗ್ರಹ ಜೀವಿ), ಯುಎಫ್‌ಓ ಕುರಿತು ಸಂಶೋಧನೆ ಮತ್ತು ಬರಹಗಳ ಮೂಲಕ ಜಗತ್ಪ್ರಸಿದ್ಧರಾಗಿದ್ದ ಡೇವಿಡ್ ವಿಲ್ಕಾಕ್ (53) ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಕೊಲೊರಾಡೋದ ಬೋಲ್ಡರ್ ಕೌಂಟಿಯಲ್ಲಿ ನಡೆದ ಗುಂಡಿನ ಚಕಮಕಿ ಮತ್ತು ಆತ್ಮಹತ್ಯೆಯ ಘಟನೆಯ ಬೆನ್ನಲ್ಲೇ ಈ ಅನುಮಾನಗಳು ದಟ್ಟವಾಗಿವೆ.

ಸೋಮವಾರ ಬೆಳಿಗ್ಗೆ ಬೋಲ್ಡರ್ ಕೌಂಟಿಯ ರಿಡ್ಜ್ ರೋಡ್ ಬಳಿ ವ್ಯಕ್ತಿಯೊಬ್ಬರು ಮಾನಸಿಕ ಒತ್ತಡದಲ್ಲಿದ್ದು, ಆಯುಧ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂಬ ಕರೆ ಪೊಲೀಸರಿಗೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಡೆಪ್ಯೂಟಿಗಳು ವ್ಯಕ್ತಿಯನ್ನು ಮನವೊಲಿಸಲು ಯತ್ನಿಸಿದರಾದರೂ, ಕೆಲವೇ ಕ್ಷಣಗಳಲ್ಲಿ ಆತ ತನ್ನ ಬಳಿಯಿದ್ದ ಶಸ್ತ್ರದಿಂದ ತಾನೇ ಗುಂಡಿಟ್ಟುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಈ ಮೃತ ವ್ಯಕ್ತಿ ಡೇವಿಡ್ ವಿಲ್ಕಾಕ್ ಇರಬಹುದು ಎಂದು ನೆಟ್ಟಿಗರು ಶಂಕಿಸುತ್ತಿದ್ದಾರಾದರೂ, ಅಲ್ಲಿನ ಅಧಿಕಾರಿಗಳು ಅಥವಾ ವಿಲ್ಕಾಕ್ ಕುಟುಂಬಸ್ಥರು ಈ ಬಗ್ಗೆ ಇಂದಿನವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ.

ವಿಜ್ಞಾನಿಗಳ ನಿಗೂಢ ಕಣ್ಮರೆ: ತಲ್ಲಣಗೊಂಡ ಶ್ವೇತಭವನ
ಡೇವಿಡ್ ವಿಲ್ಕಾಕ್ ಸಾವಿನ ಸುದ್ದಿಯ ನಡುವೆಯೇ ಅಮೆರಿಕದ ವಿಜ್ಞಾನಿಗಳ ಸರಣಿ ಸಾವು ಮತ್ತು ಕಣ್ಮರೆಗಳು ದೊಡ್ಡ ಆತಂಕ ಮೂಡಿಸಿವೆ. ಅದರಲ್ಲೂ ವಿಶೇಷವಾಗಿ ಪರಮಾಣು ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ನಿಗೂಢವಾಗಿ ಕಣ್ಮರೆಯಾಗುತ್ತಿರುವುದು ಭದ್ರತಾ ಸಂಸ್ಥೆಗಳ ನಿದ್ದೆಗೆಡಿಸಿದೆ. ಇದು ವಿದೇಶಿ ಗುಪ್ತಚರ ಸಂಸ್ಥೆಗಳ ಸಂಚಿರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಎಫ್‌ಬಿಐ (FBI) ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ.

ಏಲಿಯನ್‌ಗಳ ರಹಸ್ಯ ಮತ್ತು ವಿಲ್ಕಾಕ್
ಡೇವಿಡ್ ವಿಲ್ಕಾಕ್ ಕೇವಲ ಬರಹಗಾರರಷ್ಟೇ ಅಲ್ಲ, ಸರ್ಕಾರಗಳು ಪರಗ್ರಹ ಜೀವಿಗಳ ಬಗ್ಗೆ ಮುಚ್ಚಿಟ್ಟಿರುವ ರಹಸ್ಯಗಳನ್ನು ಹೊರಹಾಕುವ ‘ಡಿಸ್‌ಕ್ಲೋಷರ್ ಮೂವ್‌ಮೆಂಟ್’ನ ಪ್ರಮುಖ ನಾಯಕರಾಗಿದ್ದರು. ತಾವು ಎಡ್ಗರ್ ಕೇಯ್ಸ್ ಎಂಬ ಪ್ರಸಿದ್ಧ ಅತೀಂದ್ರಿಯ ಶಕ್ತಿಯ ಪುನರ್ಜನ್ಮ ಎಂದು ಅವರು ನಂಬಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ಕ್ಯು-ಅನಾನ್ (QAnon) ಸೇರಿದಂತೆ ಹಲವು ವಿವಾದಾತ್ಮಕ ಸಿದ್ಧಾಂತಗಳ ಬಗ್ಗೆಯೂ ಮಾತನಾಡುತ್ತಿದ್ದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಇದು ಸಂಚಿನ ಭಾಗವೇ?
ವಿಲ್ಕಾಕ್ ಸಾವಿನ ಸುದ್ದಿ ಅಧಿಕೃತವಾಗಿ ದೃಢಪಡದಿದ್ದರೂ, ಕಳೆದ ಕೆಲವೇ ತಿಂಗಳಲ್ಲಿ ಎರಿಕ್ ವಾನ್ ಡಾನಿಕನ್ ಮತ್ತು ನಿಕ್ ಪೋಪ್ ಅವರಂತಹ ಯುಎಫ್‌ಓ (UFO) ಸಂಶೋಧಕರು ವಿಧಿವಶರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಂಶೋಧಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ವ್ಯವಸ್ಥಿತ ಸಂಚು ಇದಾಗಿರಬಹುದೇ ಎಂಬ ಚರ್ಚೆ ಈಗ ಜಾಗತಿಕ ಮಟ್ಟದಲ್ಲಿ ಮುನ್ನೆಲೆಗೆ ಬಂದಿದೆ.
