ಲಂಡನ್/ವಾಷಿಂಗ್ಟನ್: ಇರಾನ್- ಅಮೆರಿಕಾ ನಡುವಿನ ಯುದ್ಧಕ್ಕೆ ಅಂತ್ಯಹಾಡಲು ಮುಂದಾಗಿದ್ದ ಪಾಕಿಸ್ತಾನದ ಮಧ್ಯಸ್ಥಿಕೆ ಕೊನೆಗೂ ವಿಫಲಗೊಂಡಿದ್ದು, ಇರಾನ್ ಹಡಗುಗಳ ಮೇಲಿನ ದಾಳಿಯನ್ನು ಮತ್ತೆ ಮುಂದುವರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಿದ ಬೆನ್ನಲ್ಲೇ, ಇರಾನ್‌ನ ಕ್ರಾಂತಿಕಾರಿ ಗಾರ್ಡ್ಸ್ (IRGC) ಹಾರ್ಮುಜ್ ಜಲಸಂಧಿಯಲ್ಲಿ ಎರಡು ಸರಕು ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ದಾಳಿಗೊಳಗಾದ ಎರಡು ಹಡಗುಗಳ ಮಾಲೀಕತ್ವ ಅಥವಾ ಅವು ಯಾವ ದೇಶದ ಬಾವುಟ ಹೊಂದಿದ್ದವು ಎಂಬ ಹೆಸರನ್ನು ವರದಿಯಲ್ಲಿ ಬಹಿರಂಗಪಡಿಸಿಲ್ಲ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ವರದಿಯ ಪ್ರಕಾರ, ಬುಧವಾರ ಮುಂಜಾನೆ 7:55ರ ಸುಮಾರಿಗೆ ಇರಾನ್‌ನ ಸಶಸ್ತ್ರ ಪಡೆಗಳು ಮೊದಲ ಸರಕು ಹಡಗಿನ ಮೇಲೆ ದಾಳಿ ನಡೆಸಿವೆ. ಯಾವುದೇ ಮುನ್ಸೂಚನೆ ನೀಡದೆ ಹಡಗಿನ ಬ್ರಿಡ್ಜ್ ಭಾಗವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದ್ದು, ಹಡಗಿಗೆ ಹಾನಿಯಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಕಾರ್ಗೋ ಹಡಗಿನ ಮೇಲೂ ದಾಳಿ ನಡೆದಿದ್ದು, ಅದು ಸಮುದ್ರದ ಮಧ್ಯೆಯೇ ಸ್ಥಗಿತಗೊಂಡಿದೆ. ಎರಡೂ ಘಟನೆಗಳಲ್ಲಿ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಶರೀಫ್ ಅವರ ಮನವಿಯ ಮೇರೆಗೆ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು. ಆದರೆ, ಇರಾನ್‌ನ ಮೇಲೆ ವಿಧಿಸಲಾಗಿರುವ ನೌಕಾ ದಿಗ್ಬಂಧನ (Blockade) ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಇರಾನ್ ಆರ್ಥಿಕವಾಗಿ ಕುಸಿಯುತ್ತಿದೆ ಮತ್ತು ಹಾರ್ಮುಜ್ ಜಲಸಂಧಿ ತೆರೆಯಲು ಅವರು ಹಪಹಪಿಸುತ್ತಿದ್ದಾರೆ” ಎಂದು ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಟ್ರೂತ್ ಸೋಶಿಯಲ್’ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದೆಡೆ, ಈ ದಾಳಿಯನ್ನು ಇರಾನ್ ಸಮರ್ಥಿಸಿಕೊಂಡಿದೆ. ತನ್ನ ಪ್ರಾದೇಶಿಕ ಸಮುದ್ರ ವ್ಯಾಪ್ತಿಯಲ್ಲಿ ಹಡಗುಗಳು ಎಚ್ಚರಿಕೆಯನ್ನು ನಿರ್ಲಕ್ಷಿಸಿವೆ ಎಂದು ಇರಾನ್‌ನ ಫಾರ್ಸ್ ಮತ್ತು ತಸ್ನಿಮ್ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಅಮೆರಿಕವು ಇರಾನ್‌ನ ಹಡಗುಗಳನ್ನು ವಶಪಡಿಸಿಕೊಳ್ಳುತ್ತಿರುವುದು ಮತ್ತು ನೌಕಾ ದಿಗ್ಬಂಧನ ವಿಧಿಸಿರುವುದು ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಆರೋಪಿಸಿದೆ. ಈ ಘರ್ಷಣೆಯು ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

ಪಾಕಿಸ್ತಾನದ ಮಧ್ಯಸ್ಥಿಕೆ ವಿಫಲ
ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಶಾಂತಿ ಮಾತುಕತೆಗಳು ಹಳಿ ತಪ್ಪಿರುವ ಸೂಚನೆ ಸಿಗುತ್ತಿದೆ. ಟ್ರಂಪ್ ಅವರ ಕದನ ವಿರಾಮ ವಿಸ್ತರಣೆಗೆ ಇರಾನ್ ಇನ್ನೂ ಅಧಿಕೃತವಾಗಿ ಸಮ್ಮತಿ ಸೂಚಿಸಿಲ್ಲ. ಅಮೆರಿಕ ಮತ್ತು ಇರಾನ್ ನಡುವಿನ ಈ ಹಗ್ಗಜಗ್ಗಾಟವು ಕೇವಲ ರಾಜತಾಂತ್ರಿಕ ಸಮರಕ್ಕೆ ಸೀಮಿತವಾಗದೆ, ಸಮುದ್ರದ ಮೇಲಿನ ನೇರ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ. ಇದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರಗಳ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.
