ಶಿರಸಿ: ಎರಡನೇ ಮದುವೆಯಾಗಲು ಸಜ್ಜಾಗಿದ್ದ ಆಯುರ್ವೇದ ವೈದ್ಯರೊಬ್ಬರನ್ನು ಕೊಲೆಗೈದಿದ್ದ ಆರೋಪಿಯನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಕೇವಲ 24 ಗಂಟೆಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಳಲೂರು ನಿವಾಸಿ ಮಂಜುನಾಥ ಪಿ ಎಲ್(70) ಬಂಧಿತ ಆರೋಪಿ.

ಮೃತ ಡಾ. ರಮೇಶ ಫಕೀರಪ್ಪ ಕಲಕುಟಕರ ಎಂಬುವವರು ಶಿರಸಿಯ ಕೆ.ಎಚ್.ಬಿ ಕಾಲೋನಿಯಲ್ಲಿ ವಾಸವಿದ್ದು ಆಯುರ್ವೇದ ವೈದ್ಯ ವೃತ್ತಿ ನಡೆಸುತ್ತಿದ್ದರು. ಐದು ತಿಂಗಳ ಹಿಂದೆಯಷ್ಟೇ ಇವರ ಪತ್ನಿ ನಿಧನರಾಗಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ರಮೇಶ ಅವರು ಎರಡನೇ ವಿವಾಹವಾಗಲು ನಿರ್ಧರಿಸಿ ಏಪ್ರಿಲ್ 20ರಂದು ವಿವಾಹ ನಿಶ್ಚಯ ಮಾಡಿಕೊಂಡಿದ್ದರು. ಆದರೆ, ಇದಕ್ಕೂ ಮುನ್ನವೇ ಅಂದರೆ ಏಪ್ರಿಲ್ 18ರ ರಾತ್ರಿ ಮತ್ತು 19ರ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಡಾ. ರಮೇಶ ಅವರ ತಲೆಯ ಹಿಂಭಾಗಕ್ಕೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ, ಮನೆಯ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದರು.

ಈ ಸಂಬಂಧ ಮೃತರ ಅಣ್ಣ ಈರಪ್ಪ ಕಲಕುಟಕರ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಮ್ ಎನ್ ಮತ್ತು ಎಎಸ್‌ಪಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ, ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಾಂತ್ರಿಕ ವಿಶ್ಲೇಷಣೆ ಮತ್ತು ಸ್ಥಳೀಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತಂಡವು, ಆರೋಪಿ ಮಂಜುನಾಥ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಪೊಲೀಸರು ಕೊಲೆಗೆ ಬಳಸಿದ ಮಾರಕಾಸ್ತ್ರ, 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ 50,000/- ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.