ಕಾಂಗ್ರೆಸ್ ನ ಮಹಿಳಾ ವಿರೋಧಿ ಮಾನಸಿಕತೆ ಬಯಲಾಗಿದೆ: ಕ್ಯಾ| ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ನಾರಿಶಕ್ತಿ ವಂದನ್ ಅಧಿನಿಯಮ’ವು ಕೇವಲ ರಾಜಕೀಯ ಮೀಸಲಾತಿಯಲ್ಲ, ಅದು ದೇಶದ ಮಾತೃಶಕ್ತಿಗೆ ಸಲ್ಲಿಸಿದ ಗೌರವವಾಗಿದೆ. ಆದರೆ ಈ ಐತಿಹಾಸಿಕ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ಮಹಿಳಾ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಿಡಿಕಾರಿದರು.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ಕ್ಷೇತ್ರ ವಿಂಗಡಣೆಯ ನಂತರ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕುಸಿಯಲಿದೆ ಎಂದು ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಪ್ರಸ್ತುತ ಇರುವ 28 ಸೀಟುಗಳು 42 ಕ್ಕೆ ಏರಿಕೆಯಾಗಲಿವೆ. ಅದೇ ರೀತಿ ಆಂಧ್ರಪ್ರದೇಶದಲ್ಲಿ 25ರಿಂದ 38ಕ್ಕೆ, ತಮಿಳುನಾಡುವಿನಲ್ಲಿ 39 ರಿಂದ 59 ಕ್ಕೆ ಏರಿಕೆಯಾಗಲಿವೆ. ದಕ್ಷಿಣ ಭಾರತದ ಒಟ್ಟು ಪ್ರಾತಿನಿಧ್ಯ ಪ್ರಸ್ತುತ ಇರುವ 129 ಸೀಟುಗಳಿಂದ 195 ಕ್ಕೆ ಏರಿಕೆಯಾಗಲಿರುವುದರಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಮಸೂದೆಯ ಪ್ರತಿ ಸುಡುವ ಮೂಲಕ ಮಹಿಳೆಯರ ಹಕ್ಕನ್ನು ಅವಮಾನಿಸಿದ್ದಾರೆ. ದಕ್ಷಿಣದ ಧ್ವನಿ ಅಡಗುತ್ತದೆ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಿತ್ರಪಕ್ಷಗಳು ಮಾಡುತ್ತಿವೆ ಎಂದು ಕಿಡಿಕಾರಿದರು.

ಸಂಸದನಾಗಿ ಆಯ್ಕೆಯಾಗಿ ಸಂಸತ್ತಿನಲ್ಲಿ ಅನೇಕ ಮಸೂದೆಗಳು ಅಂಗೀಕಾರವಾಗಿರುವುದನ್ನು ನೋಡಿದ ಸೌಭಾಗ್ಯ ನನ್ನದು. ನಮ್ಮದು ಮಾತೃಪ್ರಧಾನ ಸಂಸ್ಕೃತಿ, ಮಾತೆಯರಿಗೆ ಗೌರವ ನೀಡಲಾಗುತ್ತಿದೆ. ಸಂಸದನಾಗುವ ಮುನ್ನ ಪೊಳಲಿಯ ತಾಯಿ ನನಗೆ ಅನುಗ್ರಹ ಪ್ರಸಾದ ನೀಡಿ ಆಶೀರ್ವದಿಸಿರುವುದನ್ನು ನೀವೆಲ್ಲರೂ ನೋಡಿದ್ದೀರಿ. ಸ್ತ್ರೀಯರಿಗೆ ಗೌರವ ಸೂಚಕವಾಗಿ ಈ ಮಸೂದೆಯೂ ಅಂಗೀಕಾರವಾಗುತ್ತದೆ ಎಂದು ಸಂತಸ ಪಟ್ಟಿದ್ದೆ. ಆದರೆ ಈ ಮಸೂದೆಗೆ ಮತ ಹಾಕದೆ ವಿರೋಧ ವ್ಯಕ್ತಪಡಿಸುವ ಮೂಲಕ ಸಮಸ್ಯ ನಾರಿಕುಲಕ್ಕೆ ಕಾಂಗ್ರೆಸ್‌ ಹಾಗೂ ವಿಪಕ್ಷಗಳು ಅನ್ಯಾಯ ಮಾಡಿದ್ದಾಗಿ ಕಿಡಿಕಾರಿದರು.

ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ಗೆ ಪ್ರಾಮಾಣಿಕತೆ ಇಲ್ಲ ಎಂದು ದೂರಿದ ಅವರು, “1996ರಿಂದಲೂ ಕಾಂಗ್ರೆಸ್ ಈ ಮಸೂದೆಯನ್ನು ನೆನೆಗುದಿಗೆ ಹಾಕಿತ್ತು. 2013-14ರಲ್ಲಿಯೂ ಜಾರಿಗೆ ತರುವಲ್ಲಿ ವಿಫಲವಾಗಿತ್ತು. ಈಗಲೂ ಸಂಸತ್ತಿನಲ್ಲಿ ಮಸೂದೆಯ ವಿರುದ್ಧ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ತನ್ನ ಮಹಿಳಾ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಜನಗಣತಿ ಮತ್ತು ಕ್ಷೇತ್ರ ವಿಂಗಡಣೆಯ ನಂತರ ವೈಜ್ಞಾನಿಕವಾಗಿ ಮೀಸಲಾತಿ ಜಾರಿಗೆ ತರುವುದು ಸಂವಿಧಾನಬದ್ಧ ಕ್ರಮ. ಇದನ್ನು ವಿರೋಧಿಸುವವರು ಮಹಿಳೆಯರ ಏಳಿಗೆಯನ್ನು ಸಹಿಸದವರು ಎಂದು ಗುಡುಗಿದರು.

ಉಜ್ವಲ ಮತ್ತು ಜನ್ ಧನ್ ಯೋಜನೆಗಳ ಮೂಲಕ ಆರ್ಥಿಕ ಸಬಲೀಕರಣ ಕಂಡಿರುವ ಮಹಿಳೆಯರು, ಇನ್ನು ಮುಂದೆ ರಾಜಕೀಯವಾಗಿಯೂ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ದೇಶದ ಒಳಿತಿಗಾಗಿ ತಂದಿರುವ ಅನೇಕ ಮಸೂದೆಗಳನ್ನು ಕಾಂಗ್ರೆಸ್‌ ವಿರೋಧಿಸಿದೆ. 2026ರ ನಂತರದ ಡೆಲಿಮಿಟೇಷನ್ ಪ್ರಕ್ರಿಯೆಯು ನಾರಿಶಕ್ತಿಗೆ ಹೊಸ ದಿಕ್ಸೂಚಿ ನೀಡಲಿದೆ. ಹೊಸದಾಗಿ ಸೃಷ್ಟಿಯಾಗುವ ಸೀಟುಗಳಲ್ಲೂ ಶೇ. 33ರಷ್ಟು ಮೀಸಲಾತಿ ಮಹಿಳೆಯರಿಗೇ ಸಿಗಲಿದೆ ಎಂದು ಪುನರುಚ್ಛರಿಸಿದರು.

error: Content is protected !!