ಬಿಜೆಪಿಯ ನಕಲಿ ಮಹಿಳಾ ಕಾಳಜಿ ದೇಶದ ಜನರಿಗೆ ತಿಳಿದಿದೆ: ಯು.ಟಿ. ಫರ್ಜಾನಾ ವಾಗ್ದಾಳಿ

ಮಂಗಳೂರು: ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯು ಮಹಿಳೆಯರ ಸಬಲೀಕರಣಕ್ಕಾಗಿ ತಂದಿದ್ದಲ್ಲ, ಬದಲಿಗೆ ಇದು ರಾಜಕೀಯ ಕುತಂತ್ರದ ಮಸೂದೆಯಾಗಿದೆ ಎಂದು ಕಾಂಗ್ರೆಸ್‌ ರಾಜ್ಯ ವಕ್ತಾರೆ ಯು.ಟಿ. ಫರ್ಜಾನಾ ಕಿಡಿಕಾರಿದ್ದಾರೆ. ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಕಲಿ ಮಹಿಳಾ ಕಾಳಜಿಯನ್ನು ದೇಶದ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಮಹಿಳಾ ಹಕ್ಕುಗಳ ರಕ್ಷಣೆಯಲ್ಲಿ ಕಾಂಗ್ರೆಸ್‌ನ ಇತಿಹಾಸವನ್ನು ಸ್ಮರಿಸಿದ ಅವರು, ಸಂವಿಧಾನದ ವಿಧಿ 14 ಮತ್ತು 15ರ ಅಡಿಯಲ್ಲಿ ಮಹಿಳೆಯರಿಗೆ ಸಮಾನ ಗೌರವ ನೀಡಿದ್ದು ಕಾಂಗ್ರೆಸ್ ಪಕ್ಷ. ವರದಕ್ಷಿಣೆ ನಿಷೇಧ ಕಾಯಿದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಹಾಗೂ ಪುತ್ರಿಯರಿಗೆ ಸಮಾನ ಆಸ್ತಿ ಹಕ್ಕು ನೀಡುವ ಮೂಲಕ ಮಹಿಳೆಯರ ಆತ್ಮಗೌರವವನ್ನು ಕಾಂಗ್ರೆಸ್ ಎತ್ತಿ ಹಿಡಿದಿದೆ. ಪುರಸಭೆ ಹಾಗೂ ಪಂಚಾಯತ್‌ಗಳಲ್ಲಿ ಮೀಸಲಾತಿ ನೀಡಿ ಅಧಿಕಾರ ನೀಡಿದ್ದು ನಮ್ಮ ಹೆಮ್ಮೆ ಎಂದು ಅವರು ಹೇಳಿದರು.

ಇದೇ ವೇಳೆ ಬಿಜೆಪಿಯ ‘ಬೇಟಿ ಪಡಾವೋ, ಬೇಟಿ ಬಚಾವೋ’ ಘೋಷಣೆಯು ಕೇವಲ ಜಾಹೀರಾತುಗಳಿಗೆ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉನ್ನಾವೋ ಮತ್ತು ಹತ್ರಾಸ್‌ ಘಟನೆಗಳಲ್ಲಿ ಮಹಿಳೆಯರ ಆತ್ಮಗೌರವದ ಮೇಲೆ ಹಲ್ಲೆ ನಡೆದಾಗ ಬಿಜೆಪಿ ಮೌನ ವಹಿಸಿತ್ತು. ಈಗ ಮಂಡಿಸಿರುವ ಮಸೂದೆಯಲ್ಲಿ ಕ್ಷೇತ್ರ ವಿಂಗಡಣೆ ಮತ್ತು ಜನಗಣತಿಯ ಷರತ್ತುಗಳನ್ನು ವಿಧಿಸಿರುವುದು ಮಸೂದೆಯನ್ನೇ ‘ಭ್ರೂಣ ಹತ್ಯೆ’ ಮಾಡಿದಂತಿದೆ. ಇದು ಕೇವಲ ಮಹಿಳೆಯರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಅವರು ಬಣ್ಣಿಸಿದರು.

ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ, ಕ್ಷೇತ್ರ ವಿಂಗಡಣೆಯ ನೆಪವಿಲ್ಲದೆ ತಕ್ಷಣವೇ ಮೀಸಲಾತಿಯನ್ನು ಜಾರಿಗೆ ತರಬೇಕು. ಸಂಸತ್ತಿನಲ್ಲಿ ಸರಳ ಬಹುಮತವಿದ್ದರೂ ಅದನ್ನು ಜಾರಿಗೊಳಿಸಲು ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಮಹಿಳೆಯರು ಮುಕ್ತವಾಗಿ ರಾಜಕೀಯ ಹಕ್ಕುಗಳನ್ನು ಚಲಾಯಿಸಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುಖಂಡರಾದ ನಮಿತಾ ಡಿ. ರಾವ್, ಗೀತಾ ಅತ್ತಾವರ, ಸುರೇಖಾ ಚಂದ್ರಹಾಸ್, ಚಂದ್ರಕಲಾ ಜೋಗಿ, ರೂಪಾ ಚೇತನ್, ಸಾರಿಕಾ ಪೂಜಾರಿ, ರೂಪಾ ಉಷಾ ಅಂಚನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!