ಪೊಳಲಿಗೆ ಹೋದ ಪಜೀರಿನ ಬಾಲಕಿ ನಿಗೂಢ ನಾಪತ್ತೆ

ಮಂಗಳೂರು: ಹತ್ತನೇ ತರಗತಿಯ ಪರೀಕ್ಷೆ ಮುಗಿಸಿ ಮನೆಯಲ್ಲಿದ್ದ ಆ ಬಾಲಕಿ, ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಇನ್ನು ಮನೆ ಸೇರಿಲ್ಲ. ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಅಡ್ಕ ನಿವಾಸಿ ಜಗದೀಶ್ ಪೂಜಾರಿ ಅವರ ಮಗಳು ಚೈತನ್ಯ (16) ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ.

ಹರೇಕಳದ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಚೈತನ್ಯ, ಏಪ್ರಿಲ್ 12ರಂದು ಬೆಳಿಗ್ಗೆ 7:30ರ ಸುಮಾರಿಗೆ “ಗೆಳೆಯರ ಜೊತೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ” ಎಂದು ತಂದೆಗೆ ಹೇಳಿ ಮನೆಯಿಂದ ಹೊರಬಂದಿದ್ದಳು. ಆದರೆ ಸಂಜೆಯಾದರೂ ಮಗಳು ಮರಳದಿದ್ದಾಗ ಪೋಷಕರು ಗಾಬರಿಗೊಂಡಿದ್ದಾರೆ. ಸಂಬಂಧಿಕರ ಮನೆ, ಗೆಳೆಯರ ಮನೆ ಹೀಗೆ ಎಲ್ಲೆಡೆ ಹುಡುಕಾಡಿದರೂ ಚೈತನ್ಯಳ ಸುಳಿವು ಸಿಗಲಿಲ್ಲ. ಕೊನೆಗೆ ತಾಯಿ ಗುಲಾಬಿ ಅವರು ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ಸ್ವೀಕರಿಸಿದ ಕೋಣಾಜೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 137(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಸುತ್ತಮುತ್ತಲಿನ ಠಾಣೆಗಳಿಗೂ ಮಾಹಿತಿ ನೀಡಲಾಗಿದ್ದು, ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.

ಗುರುತು ಪತ್ತೆಗೆ ಸಹಾಯ ಮಾಡಿ:
ಹೆಸರು: ಚೈತನ್ಯ (16 ವರ್ಷ)
ಚಹರೆ: 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ.
ಧರಿಸಿದ್ದ ಬಟ್ಟೆ: ನೇರಳೆ ಬಣ್ಣದ ಗೌನ್ ಮತ್ತು ಕಪ್ಪು ಬಣ್ಣದ ಕೋಟ್.
ಭಾಷೆ: ಕನ್ನಡ ಮತ್ತು ತುಳು ಮಾತನಾಡುತ್ತಾಳೆ.

ಈ ಬಾಲಕಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಮಂಗಳೂರು ನಗರ ನಿಯಂತ್ರಣ ಕೊಠಡಿ (0824-2220800) ಅಥವಾ ಕೋಣಾಜೆ ಪೊಲೀಸ್ ಠಾಣೆ (0824-2220536, 9480802350) ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

error: Content is protected !!