ಮಂಜೇಶ್ವರ/ಕಾಸರಗೋಡು: ಇತಿಹಾಸದ ಪುಟಗಳಲ್ಲಿ ಅಚ್ಚೊತ್ತಿರುವ ಆ ಭಯಾನಕ ಕೊಲೆಗಡುಕ ʻರಿಪ್ಪರ್’ ಚಂದ್ರನಿಗೆ ನೇಣಿನ ಕುಣಿಕೆ ಬಿಗಿಯುವಂತೆ ಮಾಡಿದ್ದ ಆ ಕೆಚ್ಚೆದೆಯ ಸಾಕ್ಷಿ ಇಂದು ಮೌನವಾಗಿದೆ. 1985ರಲ್ಲಿ ಇಡೀ ಕರಾವಳಿಯನ್ನೇ ನಡುಗಿಸಿದ್ದ ವಾಮಂಜೂರು ಅವಳಿ ಕೊಲೆ ಪ್ರಕರಣದ ಏಕೈಕ ಕಣ್ಣಾರೆ ಕಂಡ ಸಾಕ್ಷಿ ಬಾಲಚಂದ್ರ (53), ವಾಮಂಜೂರು ಚೆಕ್ ಪೋಸ್ಟ್ ಬಳಿಯ ತನ್ನ ಮನೆಯಲ್ಲೇ ನಿಗೂಢವಾಗಿ ಅಸುನೀಗಿದ್ದಾರೆ.

ಅಂದು 13ರ ಹರೆಯದ ಬಾಲಕನ ಸಾಹಸ:
ವಿಷಯ ಹಳೆಯದಾದರೂ ಮೈ ನಡುಗಿಸುತ್ತದೆ. ಅಂದು ಕೇವಲ 13 ವರ್ಷದ ಹುಡುಗನಾಗಿದ್ದ ಬಾಲಚಂದ್ರ, ಕತ್ತಲ ರಾತ್ರಿಯಲ್ಲಿ ಆ ರಾಕ್ಷಸ ʻರಿಪ್ಪರ್’ ಚಂದ್ರ ತನ್ನ ತಂದೆ ನರಸಪ್ಪಯ್ಯ ಹಂದೆ ಮತ್ತು ಕೆಲಸಗಾರ ವಿಶ್ವನಾಥನ್ ಅವರನ್ನು ಪಿಕಾಸಿಯಿಂದ ಹೊಡೆದು ಸಾಯಿಸುವುದನ್ನು ಕಣ್ಣಾರೆ ಕಂಡಿದ್ದ. ಅಷ್ಟೇ ಅಲ್ಲ, ತಾಯಿ ಇಂದಿರಾ ಹಂದೆ ಮೇಲಿನ ಭೀಕರ ಹಲ್ಲೆಯನ್ನೂ ನೋಡಿದ್ದ. ನ್ಯಾಯಾಲಯದಲ್ಲಿ ಆ ಕಿರಾತಕನ ಕಣ್ಣಿಗೆ ಕಣ್ಣಿಟ್ಟು ಈತ ನುಡಿದ ಸಾಕ್ಷಿಯೇ 1991ರಲ್ಲಿ ರಿಪ್ಪರ್ ಚಂದ್ರನನ್ನು ಕಣ್ಣೂರು ಜೈಲಿನಲ್ಲಿ ನೇಣುಗಂಬಕ್ಕೆ ಏರಿಸುವಂತೆ ಮಾಡಿತ್ತು.

ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಶವ:
ಮಂಗಳೂರಿನಲ್ಲಿ ವಾಸವಾಗಿರುವ ಸಹೋದರಿ ಶಶಿಕಲಾ ಅವರು ಮೂರು ದಿನಗಳಿಂದ ಫೋನ್ ಮಾಡಿದರೂ ಬಾಲಚಂದ್ರ ಅವರು ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಬುಧವಾರ ಸಂಜೆ ಮನೆಗೆ ಬಂದು ನೋಡಿದಾಗ, ಒಳಗಿನಿಂದ ಲಾಕ್ ಆಗಿದ್ದ ಮನೆಯೊಳಗೆ ಬಾಲಚಂದ್ರ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುತ್ತಮುತ್ತಲ ದೇವಸ್ಥಾನಗಳಲ್ಲಿ ಅರ್ಚಕರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಇವರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಕೇರಳದ ಕೊನೆಯ ʻನೇಣು’ ಮತ್ತು ಈ ಸಾಕ್ಷಿ:
ರಿಪ್ಪರ್ ಚಂದ್ರನಿಗೆ 14 ಕೊಲೆಗಳ ಆರೋಪವಿದ್ದರೂ, ಆತನಿಗೆ ಮರಣದಂಡನೆ ಶಿಕ್ಷೆ ಸಿಗುವಂತೆ ಮಾಡಿದ್ದು ಇದೇ ವಾಮಂಜೂರು ಕೇಸ್. ಕೇರಳದಲ್ಲಿ ನಡೆದ ಕೊನೆಯ ಮರಣದಂಡನೆ ಶಿಕ್ಷೆ (ಜುಲೈ 6, 1991) ಇದೇ ಆಗಿತ್ತು. ಅಂತಹ ಇತಿಹಾಸ ಪ್ರಸಿದ್ಧ ಪ್ರಕರಣದ ಹೀರೋ ಆಗಿದ್ದ ಬಾಲಚಂದ್ರ, ಇಂದು ಯಾರೂ ಇಲ್ಲದ ವೇಳೆ ಏಕಾಂಗಿಯಾಗಿ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ.
ಸದ್ಯಕ್ಕೆ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದರಿಂದ ಇದು ಸಹಜ ಸಾವು ಇರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ಅಸಲಿ ರಹಸ್ಯ ಹೊರಬೀಳಬೇಕಿದೆ.