
ಶಿವಮೊಗ್ಗ: ವೈನ್ ಶಾಪ್ ನಲ್ಲಿ ನಡೆಯುತ್ತಿದ್ದ ಗಲಾಟೆ ನಿಲ್ಲಿಸಲು ಹೋದ ಯುವಕನ ಮೇಲೆಯೇ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ರಾಗಿಗುಡ್ಡದ ಸಮೀಪ ಹೊನ್ನಾಳಿ ರಸ್ತೆಯಲ್ಲಿ ನಡೆದಿದೆ.

ರಾಗಿಗುಡ್ಡದ ನಿವಾಸಿ ಸುನೀಲ್ ಕುಮಾರ್ (27) ಚೂರಿ ಇರಿತಕ್ಕೆ ಒಳಗಾದ ಯುವಕ.
ಸುನೀಲ್ ಕುಮಾರ್ ತನ್ನ ಸ್ನೇಹಿತ ರಘು ಎಂಬವರ ಜೊತೆಗೂಡಿ ಹೊನ್ನಾಳಿ ರಸ್ತೆಯಲ್ಲಿರುವ ವೈನ್ ಶಾಪ್ ಗೆ ತೆರಳಿದ್ದರು. ಈ ವೇಳೆ ಅದೇ ಮದ್ಯದಂಗಡಿಯಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಗುಂಪಿನೊಂದಿಗೆ ಯಾವುದೋ ವಿಚಾರಕ್ಕೆ ವಾಗ್ವಾದಕ್ಕಿಳಿದು ಜಗಳವಾಡುತ್ತಿದ್ದ. ಇದನ್ನು ಗಮನಿಸಿದ ಸುನೀಲ್ ಕುಮಾರ್ ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಅಲ್ಲಿಗೆ ತೆರಳಿ ಜಗಳ ಬಿಡಿಸಲು ಮುಂದಾಗಿದ್ದಾರೆ.

ಈ ವೇಳೆ ಅಲ್ಲಿ ಜಗಳವಾಡುತ್ತಿದ್ದ ವ್ಯಕ್ತಿ ಸುನೀಲ್ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಇದರಿಂದ ಸುನಿಲ್ ಕುಮಾರ್ ತಲೆ, ಕುತ್ತಿಗೆ ಹಾಗೂ ಮುಖದ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಗಾಯಾಳು ಸುನೀಲ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.