ಚೆನ್ನೈ: ಐಪಿಎಲ್ 2026ರ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಈಗ ಏನೋ ಒಂದು ಸಂಚಲನ. ಕಳೆದ ಐದು ಪಂದ್ಯಗಳಿಂದ ಕೇವಲ ಡಗೌಟ್‌ನಲ್ಲಿ ಕುಳಿತು ಪಂದ್ಯ ನೋಡುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಎಂಬ ಮಹಾನ್ ಜಾದೂಗಾರ ಈಗ ಮತ್ತೆ ಗ್ಲೌಸ್ ಏರಿಸಲು ಸನ್ನದ್ಧನಾಗುತ್ತಿದ್ದಾನಾ? ಕಾಲು ಸ್ನಾಯುವಿನ ನೋವಿನಿಂದ (Calf Injury) ಕಂಗೆಟ್ಟಿದ್ದ ಧೋನಿ, ಈಗ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮರಳುವ ಲಕ್ಷಣಗಳು ಕಾಣುತ್ತಿವೆ. ಗುರುವಾರ ಬೆಳಿಗ್ಗೆ ಧೋನಿ ಒಂದು ಫೈನಲ್ ಕಾಲ್ ತಗೋತಾರೆ; ಆ ಕಾಲ್ ಇಡೀ ಐಪಿಎಲ್ ಹವಾ ಬದಲಿಸಬಹುದು.

ಧೋನಿ ಅಂಗಳದಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದು ಈ ಸೀಸನ್ ಆರಂಭದಲ್ಲೇ ಗೊತ್ತಾಯಿತು. ಸಿಎಸ್‌ಕೆ ಆರಂಭಿಕ ಮೂರು ಪಂದ್ಯಗಳಲ್ಲಿ ಸೋತು ಸುಣ್ಣವಾಗಿ ಪಾಯಿಂಟ್ಸ್ ಟೇಬಲ್‌ನ ಅಟ್ಟಕ್ಕೆ ಬಿದ್ದಿತ್ತು. ಧೋನಿಯ ಲೀಡರ್‌ಶಿಪ್ ಇಲ್ಲದ ಚೆನ್ನೈ ಹಡಗು ದಿಕ್ಸೂಚಿ ಇಲ್ಲದ ಹಡಗಿನಂತಾಗಿತ್ತು. ಈಗೇನೋ ಡೆವಾಲ್ಡ್ ಬ್ರೆವಿಸ್ ಮತ್ತು ಅಕೀಲ್ ಹೊಸೈನ್ ಬಂದ ಮೇಲೆ ತಂಡ ಸ್ವಲ್ಪ ಉಸಿರಾಡುತ್ತಿದೆ. ಆದರೆ ʻಮಹಿ’ ಅಂಗಳಕ್ಕೆ ಬಂದರೆ ಆ ಮಜಾವೇ ಬೇರೆ!

ಈಗ ಹೊಸ ಚರ್ಚೆ ಶುರುವಾಗಿದೆ. ಧೋನಿ ಕೇವಲ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬರಬೇಕಾ? ಆಕಾಶ್ ಚೋಪ್ರಾ ಅಂತೂ ಖಾರವಾಗಿ ನುಡಿದಿದ್ದಾರೆ— “ಫುಟ್‌ಬಾಲ್ ತರ ಡಗೌಟ್‌ನಿಂದ ಟೀಮ್ ನಡೆಸೋಕೆ ಆಗಲ್ಲ. ಧೋನಿ ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗೋದಾದ್ರೆ ಈಗಲೇ ಶೂ ಬಿಚ್ಚಿಟ್ಟು ನಿವೃತ್ತಿ ತಗೋಬೇಕು.” ಆದರೆ ಮಿಚೆಲ್ ಮೆಕ್ಲೆನಗನ್ ಎಂಬ ಕಿವಿ ಹೇಳೋದು ಬೇರೆ; “ಧೋನಿ ಬಂದು ನಾಲ್ಕೈದು ಸಿಕ್ಸರ್ ಸಿಡಿಸಿ ಪಂದ್ಯ ಮುಗಿಸಿದರೆ ಸಾಕು, ಅವರು ಫೀಲ್ಡಿಂಗ್ ಮಾಡೋ ಅವಶ್ಯಕತೆಯೇ ಇಲ್ಲ” ಅಂತಿದ್ದಾರೆ.

ಅದರ ನಡುವೆ ಸಂಜು ಸ್ಯಾಮ್ಸನ್ ಎಂಬ ವಾರಸುದಾರ ಈಗಲೇ ಗ್ಲೌಸ್ ತೊಡಲು ಕಾಯುತ್ತಿದ್ದಾನೆ. ಈ ಸೀಸನ್ ಧೋನಿಗೆ ಕೊನೆಯದಾ? ಅಥವಾ ಈ ಕಾಲಿನ ನೋವಿನ ನಡುವೆಯೂ ಧೋನಿ ಹೈದರಾಬಾದ್ ಅಂಗಳದಲ್ಲಿ ಸಿಕ್ಸರ್‌ಗಳ ಸುರಿಮಳೆ ಸುರಿಸುತ್ತಾರಾ? ಹೈದರಾಬಾದ್ ವಿಮಾನ ಹತ್ತಲು ಧೋನಿ ರೆಡಿ ಇದ್ದಾರಾ ಅನ್ನೋ ಸತ್ಯ ಗುರುವಾರ ಮಧ್ಯಾಹ್ನದ ಹೊತ್ತಿಗೆ ನಿಮ್ಮ ಕೈಗೆ ಸಿಗಲಿದೆ.
ಒಟ್ಟಿನಲ್ಲಿ, ಧೋನಿ ಬಂದರೆ ಸಿಎಸ್‌ಕೆ ಗೆಲುವಿನ ಕಾಂಬಿನೇಷನ್ ಬದಲಾಗೋದು ಗ್ಯಾರಂಟಿ. ಆದರೆ ‘ಥಲಾ’ ಅಂಗಳಕ್ಕೆ ಇಳಿದರೆ ಸಾಕು ಎನ್ನುತ್ತಿರುವ ಕೋಟ್ಯಂತರ ಅಭಿಮಾನಿಗಳಿಗೆ ಈ ಇಂಜುರಿ ರಿಪೋರ್ಟ್ ಮಾತ್ರ ಎದೆಬಡಿತ ಹೆಚ್ಚಿಸಿದೆ!
