ಟೆಹ್ರಾನ್: ಹಾರ್ಮುಜ್ ಜಲಸಂಧಿಯ ನೀಲಿ ನೀರಿನ ಮೇಲೆ ಈಗ ಯುದ್ಧದ ಕಾರ್ಮೋಡ ಮಾತ್ರವಲ್ಲ, ಅಹಂಕಾರದ ಸಮರವೂ ನಡೆಯುತ್ತಿದೆ. “ಇರಾನ್ ಕರಾವಳಿಗೆ ಒಂದು ಹನಿ ಎಣ್ಣೆಯೂ ಹೋಗಬಾರದು, ಅಲ್ಲಿಂದ ಒಂದು ಹಡಗೂ ಹೊರಬರಬಾರದು” ಎಂದು ಅಮೇರಿಕಾ ಗುಟುರು ಹಾಕಿತ್ತು. ಆದರೆ, ವಾಷಿಂಗ್ಟನ್‌ನ ಈ ‘ಬ್ಲಾಕೇಡ್’ ಬೆದರಿಕೆಯನ್ನು ನಡುರಸ್ತೆಯಲ್ಲೇ ಅಣಕಿಸಿ ಇರಾನ್‌ನ ದೈತ್ಯ ತೈಲ ನೌಕೆಯೊಂದು ದರ್ಪದಿಂದ ದಡ ಸೇರಿದೆ. ಅಮೇರಿಕಾದ ಹದ್ದಿನ ಕಣ್ಣುಗಳ ಮುಂದೆಯೇ ಈ ʻಸೂಪರ್ ಟ್ಯಾಂಕರ್’ ಸದ್ದಿಲ್ಲದೆ ಮಣ್ಣಿನ ಮಗನಂತೆ ಮನೆಗೆ ಮರಳಿದೆ!

ಅಮೇರಿಕಾದ ಕಪ್ಪು ಪಟ್ಟಿಯಲ್ಲಿದ್ದ (Blacklisted) ಇರಾನ್‌ನ ವಿಎಲ್‌ಸಿಸಿ (VLCC) ಎಂಬ ಮಹಾನೌಕೆ, ಸುಮಾರು 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತು ಹಾರ್ಮುಜ್ ಜಲಸಂಧಿಯನ್ನು ದಾಟಿದೆ. ವಿಶೇಷವೆಂದರೆ, ಅಮೇರಿಕಾದ ಭಯಕ್ಕೆ ಸಾಮಾನ್ಯವಾಗಿ ಹಡಗುಗಳು ತಮ್ಮ ಟ್ರ್ಯಾಕಿಂಗ್ ಸಿಸ್ಟಮ್ ಆಫ್ ಮಾಡಿ ಕಳ್ಳರಂತೆ ಸಂಚರಿಸುತ್ತವೆ. ಆದರೆ ಈ ಇರಾನಿ ನೌಕೆ ತನ್ನ ʻಟ್ರ್ಯಾಕರ್’ ಆನ್ ಇಟ್ಟುಕೊಂಡೇ, “ಹಿಡಿಯುವ ತಾಕತ್ತಿದ್ದರೆ ಹಿಡಿಯಿರಿ” ಎಂದು ಸವಾಲು ಹಾಕುತ್ತಾ ಪರ್ಶಿಯನ್ ಗಲ್ಫ್ ಪ್ರವೇಶಿಸಿದೆ. ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯೇ ಈ ಸಾಹಸವನ್ನು ಎಕ್ಸ್ (X) ಖಾತೆಯಲ್ಲಿ ಜಗತ್ತಿಗೆ ಸಾರಿದೆ!

ಅತ್ತ ಅಮೇರಿಕಾದ ಸೆಂಟ್ರಲ್ ಕಮಾಂಡ್ ಮಾತ್ರ, “ಇರಾನ್‌ನ ಶೇ. 90ರಷ್ಟು ಆರ್ಥಿಕತೆಯನ್ನು ನಾವು ಹಡಗುಕಟ್ಟೆಯಲ್ಲೇ ಕಟ್ಟಿ ಹಾಕಿದ್ದೇವೆ, 36 ಗಂಟೆಗಳಲ್ಲಿ ಇರಾನ್‌ನ ಸಮುದ್ರ ವ್ಯಾಪಾರ ಶೂನ್ಯವಾಗಿದೆ” ಎಂದು ಬೀಗುತ್ತಿದೆ. ಆದರೆ ವಾಸ್ತವದ ಚಿತ್ರಣವೇ ಬೇರೆ ಇದೆ. ಲೈಬೀರಿಯಾ ಧ್ವಜ ಹೊತ್ತ ʻಕ್ರಿಸ್ಟಿಯಾನಾ’ ಮತ್ತು ಕೊಮೊರೊಸ್‌ನ ‘ಎಲ್ಪಿಸ್’ ಎಂಬ ಇನ್ನೆರಡು ಹಡಗುಗಳು ಕೂಡ ಅಮೇರಿಕಾದ ದಿಗ್ಬಂಧನ ಶುರುವಾದ ಎರಡೇ ಗಂಟೆಯಲ್ಲಿ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ ಎನ್ನುತ್ತಿದೆ ಮಾರಿಟೈಮ್ ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್ (Kpler).

ಇರಾನ್ ಈಗ ತನಗೆ ಬೇಕಾದ ಹಡಗುಗಳನ್ನು ಬಿಟ್ಟು, ತನಗೆ ಶತ್ರುಗಳಂತೆ ಕಾಣುವ ದೇಶಗಳ ಹಡಗುಗಳನ್ನು ಇದೇ ಹಾರ್ಮುಜ್ ಹಾದಿಯಲ್ಲಿ ತಡೆಯುತ್ತಿದೆ. ವಿಶ್ವದ ತೈಲ ಪೂರೈಕೆಯ ನಾಳದಂತಿರುವ ಈ ಕಿರಿದಾದ ಜಲಸಂಧಿಯಲ್ಲಿ ಈಗ ಅಮೇರಿಕಾದ ನೌಕಾಪಡೆ ಮತ್ತು ಇರಾನ್‌ನ ಜಿದ್ದಾಜಿದ್ದಿ ಜಗತ್ತನ್ನೇ ನಡುಗಿಸುತ್ತಿದೆ. ಅಮೇರಿಕಾದ ದಿಗ್ಬಂಧನವನ್ನು ಇರಾನ್ ಹೀಗೆಯೇ ಗಾಳಿಗೆ ತೂರಿದರೆ, ಮುಂದಿನ ದಿನಗಳಲ್ಲಿ ಪರ್ಶಿಯನ್ ಗಲ್ಫ್‌ನಲ್ಲಿ ದೊಡ್ಡ ಮಟ್ಟದ ಕಿಡಿ ಹೊತ್ತಿಕೊಳ್ಳುವುದು ಗ್ಯಾರಂಟಿ.
