ಪತಿಯನ್ನ ಬಿಟ್ಟು ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ವಿಷ ಕುಡಿಸಿ ಕೊಂದ ಪೋಷಕರು

ಚಿಕ್ಕೋಡಿ: ಪತಿಯನ್ನ ಬಿಟ್ಟು ಪ್ರೀತಿಸಿದವನ ಜೊತೆ ಓಡಿ ಹೋಗಿದ್ದ ಮಹಿಳೆಯನ್ನು ಪೋಷಕರು ಕರೆತಂದು ವಿಷ ಕುಡಿಸಿ ಕೊಲೆ ಮಾಡಿ, ಬಳಿಕ ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟ ಹಾಕಿದ ಘಟನೆ ಹುಕ್ಕೇರಿ ತಾಲೂಕಿನ ನದಿಗುಡಿಕೇತರ ಗ್ರಾಮದಲ್ಲಿ ನಡೆದಿದೆ

ನದಿಗುಡಿಕೇತರ ಗ್ರಾಮದ ನಿವಾಸಿ  ಸತ್ಯವ್ವ ಹೆಳವಿ ಕೊಲೆಯಾದ ಮಹಿಳೆ. ಪ್ರಕಾಶ್ ಹಳವರ (ಚಿಕ್ಕಪ್ಪ), ಕಲ್ಲಪ್ಪ ಹಾಗೂ ಶಾನೂರ (ಸಹೋದರ) ಬಂಧಿತ ಆರೋಪಿಗಳು.

ಸತ್ಯವ್ವ ಅದೇ ಗ್ರಾಮದ ಕೃಷ್ಣಾ ಪಾಟೀಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಮನೆಯಲ್ಲಿ ಗೊತ್ತಾಗಿ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೇಳವಿ ಎಂಬಾತನ ಜೊತೆ ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿದ್ದರು.

ಮದುವೆಯಾದ್ರೂ ಪ್ರೀತಿಸಿದ ಕೃಷ್ಣಾ ಜೊತೆಗೆ ಸತ್ತೆವ್ವಾ ಸಂಪರ್ಕದಲ್ಲಿದ್ದಳು. ಗಂಡ ಕುಡಿಯುತ್ತಿದ್ದಾನೆ, ತನ್ನನ್ನ ನೋಡಿಕೊಳ್ತಿಲ್ಲ ಎಂದು ಫೇ.17 ರಂದು ಗಂಡನ ಮನೆಯಿಂದ ಕೃಷ್ಣಾನ ಜೊತೆಗೆ ಸತ್ತೆವ್ವಾ ಬಂದಿದ್ದಳು. ಬಳಿಕ ಸವದತ್ತಿ ತಾಲೂಕಿನ ಬೆಳವಡಿಯಲ್ಲಿ ಬಾಡಿಗೆ ಮನೆ ಮಾಡಿ ಉಳಿದುಕೊಂಡಿದ್ದರು. 15 ದಿನಗಳ ಹಿಂದೆ ಇಬ್ಬರನ್ನು ಕುಟುಂಬಸ್ಥರು ಕರೆದುಕೊಂಡು ಬಂದಿದ್ದರು.

ಬಳಿಕ ಸತ್ತೆವ್ವಾಳನ್ನ ಆಕೆಯ ಅಣ್ಣ ಕರೆದುಕೊಂಡು ಬಂದು ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಿದ್ದ. ಅಲ್ಲಿ ಕೃಷ್ಣಾ ಪಾಟೀಲ್‍ನನ್ನು ಮರೆಯುವಂತೆ ಆಕೆಗೆ ಒತ್ತಡ ಹಾಕಲಾಗುತ್ತಿತ್ತು. ಇದಕ್ಕೆ ಒಪ್ಪದಿದ್ದಾಗ ಶಿರೋಳದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದುಕೊಂಡು ಬಂದು ಮಾರ್ಚ್ 21ರಂದು ಮಹಿಳೆಗೆ ವಿಷ ಕುಡಿಸಿ ಕೊಲೆ ಮಾಡಿದ್ದರು. ಬಳಿಕ ಸಾಕ್ಷಿ ನಾಶಕ್ಕಾಗಿ ಆಕೆಯ ಹಾಸಿಗೆ ಬಟ್ಟೆ ಸಮೇತ ಶವ ಸುಟ್ಟು ಹಾಕಿದ್ದರು.

ಸತ್ತೆವ್ವಾ ಸಂಪರ್ಕಕ್ಕೆ ಸಿಗದಿದ್ದಾಗ ಸಂಶಯಗೊಂಡಿದ್ದ ಪ್ರಿಯಕರ ಕೃಷ್ಣಾ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ದೂರಿನನ್ವಯ ತನಿಖೆ ಕೈಗೊಂಡಿದ್ದ ಸಿಪಿಐ ಜಾವೇದ್ ಮುಶಾಪುರಿ, ಮಹಿಳೆಯ ಅಣ್ಣ ಶಾನೂರನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಪ್ರಕರಣ ಸಂಬಂಧ ಆರೋಪಿಗಳಾದ ಶಾನೂರ, ಪ್ರಕಾಶ್ ಹಾಗೂ ಕಲ್ಲಪ್ಪ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!