
ಮಂಗಳೂರು: ಕಳೆದ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ನಂತೂರು-ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲಿ ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಇಂದು(ಏ.14) ಬೆಳಗ್ಗೆ ನಡೆದಿದೆ.
ಮೋಹನ್ ಕುಮಾರ್ ಮೃತ ದುರ್ದೈವಿ.

ಗೋಪಾಲ್ (29) ಎಂಬುವವರು ಚಲಾಯಿಸುತ್ತಿದ್ದ ಬೈಕ್, ಮೋಹನ್ ಕುಮಾರ್ ಅವರ ಸ್ಕೂಟರ್‌ಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಗೋಪಾಲ್ ರಸ್ತೆಗೆ ಬಿದ್ದಾಗ, ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮಂಗಳೂರು ಸಂಚಾರಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.