
ಚಿತ್ರದುರ್ಗ: ನಿಯಂತ್ರಣ ತಪ್ಪಿದ ಲಾರಿಯೊಂದು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಚಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಭರಮಸಾಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರ ಕಲ್ಕುಂಟೆ ಬಳಿ ಇಂದು(ಏ.14) ಸಂಭವಿಸಿದೆ.

ದಾವಣಗೆರೆ ಕಡೆಯಿಂದ ಬರುತ್ತಿದ್ದ ಲಾರಿಯ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಮಧ್ಯದ ಡಿವೈಡರ್ ದಾಟಿ ಚಿತ್ರದುರ್ಗ ಕಡೆಯಿಂದ ಹೋಗುತ್ತಿದ್ದ ಲಾರಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಎರಡು ಲಾರಿಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎರಡೂ ಲಾರಿಗಳ ಚಾಲಕರು ಮೃತಪಟ್ಟಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.