ಕಾಂಕೇರ್ (ಛತ್ತೀಸ್‌ಗಢ): ದೇಶದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯು ಸಂಪೂರ್ಣ ಪತನದ ಹಾದಿಯಲ್ಲಿರುವ ನಡುವೆಯೇ, ಭದ್ರತಾ ಪಡೆಗಳು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ ತೆಲುಗು ರಾಜ್ಯಗಳ ಕೊನೆಯ ಸಕ್ರಿಯ ಮಾವೋವಾದಿ ಕೆಡರ್ ‘ರೂಪಿ’ ಎಂಬಾಕೆಯನ್ನು ಹೊಡೆದುರುಳಿಸಿವೆ. ಕಾಂಕೇರ್ ಜಿಲ್ಲೆಯ ಛೋಟೆಬೆತಿಯಾ-ಪರ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಎನ್‌ಕೌಂಟರ್ ನಡೆದಿದೆ.

ಯಾರು ಈ ರೂಪಿ?:
ಏರಿಯಾ ಕಮಿಟಿ ಮಟ್ಟದ ನಾಯಕಿಯಾಗಿದ್ದ ರೂಪಿಯನ್ನು, ತೆಲುಗು ರಾಜ್ಯಗಳಿಂದ ಬಾಸ್ಟರ್ ವಲಯದಲ್ಲಿ ಸಕ್ರಿಯವಾಗಿದ್ದ ಕೊನೆಯ ಮಾವೋವಾದಿ ಎಂದು ಗುರುತಿಸಲಾಗಿದೆ. ಈಕೆ ಕಳೆದ ವರ್ಷ ಆಗಸ್ಟ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಹತರಾಗಿದ್ದ ಕುಖ್ಯಾತ ಮಾವೋವಾದಿ ಕಮಾಂಡರ್ ವಿಜಯ್ ರೆಡ್ಡಿಯ ಪತ್ನಿ. ವಿಜಯ್ ರೆಡ್ಡಿ ಮಾವೋವಾದಿ ಸಂಘಟನೆಯ ಅತ್ಯಂತ ಪ್ರಬಲ ಸಮಿತಿಯಾದ ʻದಂಡಕಾರಣ್ಯ ಸ್ಪೆಷಲ್ ಝೋನಲ್ ಕಮಿಟಿ’ಯ ಸದಸ್ಯನಾಗಿದ್ದನು.
ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್ ಅಗತ್ಯತೆಗಾಗಿ ಈಗಲೇ ಇಲ್ಲಿ ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ⬇️

ನಕ್ಸಲರು ಅಡಗಿರುವ ಬಗ್ಗೆ ಲಭಿಸಿದ ಖಚಿತ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಮಚ್‌ಪಲ್ಲಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಈ ವೇಳೆ ನಕ್ಸಲರು ಮತ್ತು ಪೊಲೀಸರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ದಾಳಿಯ ನಂತರ ಸ್ಥಳವನ್ನು ಪರಿಶೀಲಿಸಿದಾಗ ಮಹಿಳಾ ನಕ್ಸಲ್ ಕಮಾಂಡರ್ ರೂಪಿಯ ಮೃತದೇಹ ಪತ್ತೆಯಾಗಿದೆ ಎಂದು ಕಾಂಕೇರ್ ಎಸ್ಪಿ ನಿಖಿಲ್ ರಾಖೇಚಾ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ತೊಡೆದುಹಾಕಲು ವಿಧಿಸಿದ್ದ ಗಡುವಿನ ನಡುವೆಯೇ ಈ ಕಾರ್ಯಾಚರಣೆ ನಡೆದಿದೆ. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಬಾಸ್ಟರ್ ವಲಯವೊಂದರಲ್ಲೇ ಸುಮಾರು 400 ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ. ರೂಪಿ ಈ ವರ್ಷ ಬಾಸ್ಟರ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಹತರಾದ 28ನೇ ಮಾವೋವಾದಿಯಾಗಿದ್ದಾಳೆ.

ಶರಣಾಗತಿಗೆ ಐಜಿ ಕರೆ:
ಬಾಸ್ಟರ್ ರೇಂಜ್ ಐಜಿ ಸುಂದರ್ ರಾಜ್ ಪಿ. ಅವರು ಪ್ರತಿಕ್ರಿಯಿಸಿ, “ಅನೇಕರು ಸರ್ಕಾರದ ಪುನರ್ವಸತಿ ನೀತಿಗೆ ಸ್ಪಂದಿಸಿ ಶರಣಾಗುತ್ತಿದ್ದಾರೆ. ಆದರೆ ರೂಪಿಯಂತಹ ಕೆಲವರು ಹಿಂಸಾಚಾರದ ಹಾದಿ ಬಿಡದ ಕಾರಣ ಇಂತಹ ಅಂತ್ಯ ಕಂಡಿದ್ದಾರೆ” ಎಂದಿದ್ದಾರೆ. ಸದ್ಯ ಬಾಸ್ಟರ್‌ನಲ್ಲಿ ಕೇವಲ 15-16 ಮಾವೋವಾದಿಗಳು ಮಾತ್ರ ಬಾಕಿ ಉಳಿದಿದ್ದು, ಅವರು ಕೂಡ ಶೀಘ್ರವೇ ಶರಣಾಗುವಂತೆ ಐಜಿ ಮನವಿ ಮಾಡಿದ್ದಾರೆ.