
ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ಮೂಲದ ವೃಷಭ್ ಮೊಹಾಂತಿ ಅಪಹರಣಕ್ಕೊಳಗಾದ ವಿದ್ಯಾರ್ಥಿ. ಮಹಾರಾಷ್ಟ್ರ ಮೂಲದ ಅದಿತ್ಯ ಬೋಸ್ಲೆ, ಕೇರಳದ ಶೌರ್ಯ ಅಗರ್‌ವಾಲ್, ಬಿಹಾರದ ನಿಕುಂಜಿ ಮತ್ತು ಜಯನಗರ ನಿವಾಸಿ ಸೈಯದ್ ಬಿಲಾಲ್ ಬಂಧಿತ ಆರೋಪಿಗಳು.

ಆರೋಪಿಗಳು ಏ.11ರಂದು ರಾತ್ರಿ ಹಾಸ್ಟೆಲ್‌ನಿಂದ ವೃಷಭ್ ಮೊಹಾಂತಿಯನ್ನು ಅಪಹರಿಸಿ ಸೈಯದ್ ಬಿಲಾಲ್‌ನ ಮನೆಯಲ್ಲಿ ಇರಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮತ್ತೊಂದೆಡೆ ಹಾಸ್ಟೆಲ್‌ನ ಇತರೆ ವಿದ್ಯಾರ್ಥಿಗಳು ಸ್ನೇಹಿತನ ಅಪಹರಣ ಕಂಡು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮಡಿವಾಳ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಮೊಬೈಲ್ ಲೊಕೇಷನ್ ಆಧರಿಸಿ ಘಟನೆ ನಡೆದ 5 ಗಂಟೆಯೊಳಗೆ ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿಯನ್ನು ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಐಷಾರಾಮಿ ಜೀವನ ನಡೆಸಲು ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿದ್ದಾರೆ. ಈ ಸಂಬಂಧ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಎಂ.ಎ ಮೊಹಮ್ಮದ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಆರೋಪಿಗಳ ವಿಚಾರಣೆಯ ವೇಳೆ ಈ ಹಿಂದೆಯೂ ಕೆಲ ವಿದ್ಯಾರ್ಥಿಗಳನ್ನು ಅಪಹರಣ ಮಾಡಿ ಹಣ ಸುಲಿಗೆ ಮಾಡಿರುವುದು ಪತ್ತೆಯಾಗಿದೆ. ಆದಿತ್ಯ ಬೋಸ್ಲೆ, ಕಳೆದ ವರ್ಷ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ. ಬಳಿಕ ಆ ವಿದ್ಯಾರ್ಥಿ ಕಾಲೇಜು ಬಿಟ್ಟು ಹೋಗಿದ್ದಾನೆ. ಅದಕ್ಕೆ ಇತರೆ ಮೂವರು ಆರೋಪಿಗಳು ಸಹಕಾರ ನೀಡಿದ್ದಾರೆ ಎಂಬುದು ಪತ್ತೆಯಾಗಿದೆ. ಅದಕ್ಕೆ ಪೂರಕವೆಂಬಂತೆ, ಆರೋಪಿಗಳ ಮೊಬೈಲ್‌ನಲ್ಲಿ ಕೆಲವೊಂದು ಫೋಟೋ ಮತ್ತು ವಿಡಿಯೋಗಳು ಸಿಕ್ಕಿವೆ ಎಂದು ಪೊಲೀಸರು ಮಾಹಿತಿ ನೀಡಿದರು.