
ಬೆಂಗಳೂರು: ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಪಾರ್ಕಿಂಗ್ ಸಿಬ್ಬಂದಿ ರಿವರ್ಸ್ ತೆಗೆಯುವಾಗ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಂಕದಕಟ್ಟೆಯ ಸಿದ್ದಾರ್ಥನಗರ ಬಡಾವಣೆಯ ನಿವಾಸಿ ಸ್ವಾಮಿದೊರೆ (50) ಮೃತ ದುರ್ದೈವಿ.

ತಮಿಳುನಾಡು ಮೂಲದ ಸ್ವಾಮಿದೊರೆ ದಂಪತಿ ಕಾರ್ಯ ನಿಮಿತ್ತ ತಮಿಳುನಾಡಿಗೆ ಹೋಗಿದ್ದು, ಭಾನುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ನಡೆದುಕೊಂಡು ಬಿಎಂಟಿಸಿ ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದರು. ಅದೇ ವೇಳೆ ಪ್ರಯಾಣಿಕರೊಬ್ಬರು ಪಾರ್ಕ್ ಮಾಡಿ ಹೋಗಿದ್ದ ಕಾರನ್ನು ಪಾರ್ಕಿಂಗ್ ಸಿಬ್ಬಂದಿ ಸುಬ್ರಮಣ್ಯಂ ರಿವರ್ಸ್ ತೆಗೆಯುವಾಗ ವೇಗವಾಗಿ ಬಂದು ಸ್ವಾಮಿದೊರೆಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯಯೇ ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಮೃತರ ಪತ್ನಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಿದ ವೇಳೆ ಆರೋಪಿ ಮದ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.