ಮೂಡುಬಿದಿರೆ: ಅತ್ಯಂತ ಹಿಂಸಾತ್ಮಕವಾಗಿ ಮತ್ತು ಅಕ್ರಮವಾಗಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಎಂಟು ಜಾನುವಾರುಗಳನ್ನು ಮೂಡುಬಿದಿರೆ ಪೊಲೀಸರು ಭಾನುವಾರ ತೋಡಾರು ಎಂಬಲ್ಲಿ ರಕ್ಷಿಸಿದ್ದಾರೆ. ಕಾರ್ಯಾಚರಣೆ ವೇಳೆ ಸಾಗಾಟಕ್ಕೆ ಬಳಸಿದ ಪಿಕಪ್ ಮತ್ತು ಅದಕ್ಕೆ ಬೆಂಗಾವಲಾಗಿ ಬಂದಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮೂಡುಬಿದಿರೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರತಿಭಾ ಕೆ.ಸಿ. ಮತ್ತು ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ, ತೋಡಾರು ಕಡೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ತೋಡಾರು ಗ್ರಾಮದ ಪ್ರವೇಶದ್ವಾರದ ಬಳಿ ಕಾಯುತ್ತಿದ್ದರು. ಈ ವೇಳೆ ಗರಡಿ ಕಡೆಯಿಂದ ವೇಗವಾಗಿ ಬಂದ ವ್ಯಾಗನ್-ಆರ್ ಕಾರು ಮತ್ತು ಅದನ್ನು ಹಿಂಬಾಲಿಸುತ್ತಿದ್ದ ಪಿಕಪ್ ವಾಹನವನ್ನು ತಡೆಯಲು ಪೊಲೀಸರು ಸಂಕೇತ ನೀಡಿದರು.

ಪೊಲೀಸರ ಸಂಕೇತವನ್ನೂ ಲೆಕ್ಕಿಸದೆ ವಾಹನಗಳು ನಿಲ್ಲಿಸದೆ ಮುನ್ನುಗ್ಗಿದಾಗ, ಪೊಲೀಸರು ತಕ್ಷಣ ಬೆನ್ನಟ್ಟಿ ಅವುಗಳನ್ನು ತಡೆಯುವಲ್ಲಿ ಯಶಸ್ವಿಯಾದರು. ಪೊಲೀಸರು ವಾಹನವನ್ನು ಸುತ್ತುವರಿಯುತ್ತಿದ್ದಂತೆಯೇ, ಪಿಕಪ್ ಚಾಲಕ ಹರ್ಷದ್ ಮತ್ತು ಆತನ ಸಹಚರರು ವಾಹನ ಬಿಟ್ಟು ಓಡಿಹೋಗಿದ್ದಾರೆ. ಇವರಿಗೆ ಬೆಂಗಾವಲಾಗಿ ಬಂದಿದ್ದ ಕಾರಿನ ಚಾಲಕ ಸಫರ್ ಮತ್ತು ಹಂಡೇಲು ನಿವಾಸಿ ಅಬೂಬಕರ್ ಕೂಡ ಸ್ಥಳದಿಂದ ಪರಾರಿಯಾಗಿದ್ದಾರೆ.

ಪೊಲೀಸರು ಪಿಕಪ್ ವಾಹನವನ್ನು ಪರಿಶೀಲಿಸಿದಾಗ, ಅದರಲ್ಲಿ ಎರಡು ಹಸುಗಳು, ಎರಡು ಎತ್ತುಗಳು ಮತ್ತು ನಾಲ್ಕು ಗಂಡು ಕರುಗಳನ್ನು ಕಾಲು ಹಾಗೂ ಕುತ್ತಿಗೆಗೆ ಹಗ್ಗದಿಂದ ಬಿಗಿದು ಅತ್ಯಂತ ಕ್ರೂರವಾಗಿ ತುಂಬಿರುವುದು ಕಂಡುಬಂದಿದೆ. ರಕ್ಷಿಸಲಾದ ಎಂಟು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಘಟನೆಗೆ ಸಂಬಂಧಿಸಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಹರ್ಷದ್, ಸಫರ್ ಮತ್ತು ಅಬೂಬಕರ್ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
