
ಉತ್ತರ ಪ್ರದೇಶ: ಮದುವೆ ಸಂಭ್ರಮ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಧೌಲಾನಾ-ಗುಲಾವತಿ ರಸ್ತೆಯಲ್ಲಿ ಇಂದು(ಏ.13) ಸಂಭವಿಸಿದೆ.

ಪ್ರಯಾಣಿಕರಿದ್ದ ಮದುವೆ ಬಸ್ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಟ್ರಕ್ ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಹೈಡ್ರಾ ಕ್ರೇನ್ ಬಸ್ಸಿನ ಮೇಲೆ ಉರುಳಿಬಿದ್ದಿದ್ದು, ಪ್ರಯಾಣಿಕರು ಕಬ್ಬಿಣದ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದರು.

ಅಪಘಾತದಲ್ಲಿ ಗಾಯಗೊಂಡಿರುವ ಏಳು ಮಂದಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಬಸ್ಸಿನಲ್ಲಿ ಒಟ್ಟು 12 ಜನರಿದ್ದರು. ಮೃತರ ಪೈಕಿ ಒಬ್ಬನ ಗುರುತು ಇನ್ನೂ ಪತ್ತೆಯಾಗಬೇಕಿದ್ದು, ಆತ ಬಸ್ ಚಾಲಕನಿರಬಹುದು ಎಂದು ಶಂಕಿಸಲಾಗಿದೆ.
ಅಪಘಾತದ ಬಳಿಕ ರಸ್ತೆಯಲ್ಲಿದ್ದ ಲಾರಿ ಮತ್ತು ಕ್ರೇನ್ ಅನ್ನು ತೆರವುಗೊಳಿಸಲಾಗಿದ್ದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.