ಮಂಗಳೂರು: ನಗರದ ಫಳ್ನೀರ್‌ನಲ್ಲಿರುವ ಕಾರು ಆಲ್ಟ್ರೇಷನ್ ಸೆಂಟರ್‌ನಲ್ಲಿ ಇಂದು(ಏ.13) ಬೆಳಿಗ್ಗೆ ಸುಮಾರು 7:30ರ ವೇಳೆಗೆ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು, ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಹಾನಿಗೊಳಗಾಗಿವೆ.

ಆಲ್ಟ್ರೇಷನ್‌ಗಾಗಿ ಮಳಿಗೆಯಲ್ಲಿ ಇರಿಸಲಾಗಿದ್ದ ಮೂರು ಕಾರುಗಳು ಬೆಂಕಿಗೆ ಆಹುತಿಯಾಗಿದಲ್ಲದೆ, ಅಂಗಡಿಯಲ್ಲಿದ್ದ ಬೆಲೆಬಾಳುವ ಉಪಕರಣಗಳು ಮತ್ತು ಬಿಡಿಭಾಗಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅನಾಹುತ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಮಳಿಗೆಯಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ, ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಸಮಯದಲ್ಲಿ ಮಳಿಗೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಅವಘಡದಿಂದ ಉಂಟಾದ ನಷ್ಟದ ಕುರಿತು ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.