“ಪರೀಕ್ಷೆಗಳು ಜೀವನದ ಒಂದು ಸಣ್ಣ ಭಾಗವಷ್ಟೇ”: ವಿದ್ಯಾರ್ಥಿಗಳ ಪರೀಕ್ಷಾ ಆತಂಕ ದೂರ ಮಾಡಲು ಅನನ್ಯ ಪಾಂಡೆ ಕರೆ

ಮುಂಬೈ: ದೇಶಾದ್ಯಂತ ಪರೀಕ್ಷಾ ಹಂಗಾಮು ಶುರುವಾಗಿದ್ದು, ವಿದ್ಯಾರ್ಥಿಗಳಲ್ಲಿ ಮನೆಮಾಡಿರುವ ಆತಂಕ ಮತ್ತು ಒತ್ತಡವನ್ನು ದೂರ ಮಾಡಲು ಬಾಲಿವುಡ್ ನಟಿ ಅನನ್ಯ ಪಾಂಡೆ ಮುಂದಾಗಿದ್ದಾರೆ. ಕಿಡ್ಸ್ ಎಂಟರ್‌ಟೈನ್‌ಮೆಂಟ್ ಬ್ರ್ಯಾಂಡ್ ʻನಿಕ್’ (Nickelodeon) ಜೊತೆ ಕೈಜೋಡಿಸಿರುವ ಅವರು, “ಪರೀಕ್ಷೆಗಳು ಜೀವನದ ಕೇವಲ ಒಂದು ಸಣ್ಣ ಭಾಗವಷ್ಟೇ ಹೊರತು, ಅದೇ ಜೀವನವಲ್ಲ” ಎಂಬ ಸಂದೇಶವನ್ನು ಸಾರುತ್ತಿದ್ದಾರೆ.

ಪರೀಕ್ಷೆ ಎಂಬ ಹೆಸ ಕೇಳುತ್ತಿದ್ದಂತೆಯೇ ಮಕ್ಕಳು ಮತ್ತು ಪೋಷಕರಲ್ಲಿ ಒತ್ತಡ ಸೃಷ್ಟಿಯಾಗುವುದು ಸಹಜ. ಇದನ್ನು ಮನಗಂಡಿರುವ ಅನನ್ಯ ಪಾಂಡೆ, ವಿದ್ಯಾರ್ಥಿಗಳು ಆರಾಮವಾಗಿ ಮತ್ತು ಧನಾತ್ಮಕವಾಗಿ ಪರೀಕ್ಷೆಯನ್ನು ಎದುರಿಸುವಂತೆ ಪ್ರೇರೇಪಿಸುತ್ತಿದ್ದಾರೆ. “ಪರೀಕ್ಷೆಗಳು ನಿಮ್ಮ ಜ್ಞಾನವನ್ನು ಪರೀಕ್ಷಿಸುತ್ತವೆ ನಿಜ, ಆದರೆ ಅವು ನಿಮ್ಮ ಒಟ್ಟಾರೆ ವ್ಯಕ್ತಿತ್ವ ಅಥವಾ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಪರೀಕ್ಷೆಯ ಫಲಿತಾಂಶಕ್ಕಿಂತ ನಿಮ್ಮ ಪ್ರಯತ್ನ ಮುಖ್ಯ” ಎಂದು ಅವರು ಹೇಳಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ನಿಕಲೋಡಿಯನ್ (Nick) ಸಂಸ್ಥೆಯು ಪ್ರತಿ ವರ್ಷವೂ ಪರೀಕ್ಷಾ ಸಮಯದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ವಿವಿಧ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತದೆ. ಈ ಬಾರಿ ಅನನ್ಯ ಪಾಂಡೆ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಸಣ್ಣ ವೀಡಿಯೋಗಳು ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಮಕ್ಕಳನ್ನು ತಲುಪುತ್ತಿದೆ. “ಒತ್ತಡ ಬೇಡ, ಉತ್ಸಾಹದಿಂದ ಓದಿ” ಎಂಬುದು ಈ ಅಭಿಯಾನದ ಮೂಲ ಮಂತ್ರವಾಗಿದೆ.

ಕೇವಲ ಮಕ್ಕಳಿಗೆ ಮಾತ್ರವಲ್ಲದೆ, ಪೋಷಕರಿಗೂ ಅನನ್ಯ ಅವರು ಕಿವಿಮಾತು ಹೇಳಿದ್ದಾರೆ. ಮಕ್ಕಳ ಮೇಲೆ ಹೆಚ್ಚಿನ ಅಂಕ ಗಳಿಸುವಂತೆ ಒತ್ತಡ ಹೇರದೆ, ಅವರ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಿ ಎಂದು ವಿನಂತಿಸಿದ್ದಾರೆ. ಮಕ್ಕಳು ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕೇ ಹೊರತು ಭಯಪಡಬಾರದು ಎಂಬುದು ಈ ಅಭಿಯಾನದ ಆಶಯವಾಗಿದೆ.

error: Content is protected !!