ಅಹಮದಾಬಾದ್: ಮಾರ್ಕೆಟ್‌ನಲ್ಲಿ ಸಿಗುವ ದೋಸೆ ಹಿಟ್ಟಿನಲ್ಲಿ ತಯಾರಿಸಿದ್ದ ದೋಸೆ ತಿಂದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಪೋಷಕರ ಸ್ಥಿತಿ ಗಂಭೀರವಾಗಿರುವ ಘಟನೆಯೊಂದು ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ನಡೆದಿದೆ.

ಮೂರು ತಿಂಗಳ ಶಿಶು ರಾಹಾ ಮತ್ತು ನಾಲ್ಕು ವರ್ಷದ ಬಾಲಕಿ ಮಿಶ್ರಿ ಮೃತಪಟ್ಟ ಪುಟ್ಟ ಕಂದಮ್ಮಗಳು.
3 ತಿಂಗಳ ಮಗುವಿಗೆ ದೋಸೆ ನೀಡದಿದ್ದರೂ ಮೃತಪಟ್ಟಿದೆ. ತಾಯಿ ದೋಸೆ ಸೇವಿಸಿದ ಬಳಿಕ ಸ್ತನ್ಯಪಾನ ಮಾಡಿಸಿರಬಹುದು. ಹಾಗಾಗಿ ಮಗು ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ದಂಪತಿಗಳು ಸ್ಥಳೀಯ ಡೈರಿಯಿಂದ ದೋಸೆ ಹಿಟ್ಟನ್ನು ಖರೀದಿಸಿ ತಂದಿದ್ದರು. ಇದನ್ನು ಸೇವಿಸಿದ ಇಡೀ ಕುಟುಂಬಕ್ಕೆ ತೀವ್ರವಾಗಿ ವಾಂತಿ-ಭೇದಿಯಾಗಿ ಫುಡ್ ಪಾಯ್ಸನ್ ಆಗಿ ಪರಿಣಮಿಸಿದೆ. ತಾಯಿ ಭಾವನಾ ಮತ್ತು ತಂದೆ ವಿಮಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಈ ಕುರಿತು ವಿಮಲ್ ತಂದೆ ಗೌರಿಶಂಕರ್ ಪ್ರಜಾಪತಿ ಮಾತನಾಡಿ, ನನ್ನ ಮಗ ಐಓಸಿ ರಸ್ತೆಯಲ್ಲಿರುವ ಘನಶ್ಯಾಮ್ ಡೈರಿಯಿಂದ ಏಪ್ರಿಲ್ 1ರ ರಾತ್ರಿ 8 ಗಂಟೆಗೆ ಹಿಟ್ಟು ತಂದಿದ್ದ. ಅದರಿಂದ ಮಾಡಿದ ದೋಸೆ ತಿಂದ ಬಳಿಕ ಮರುದಿನ ಬೆಳಗ್ಗೆ ಅವನಿಗೆ ವಾಂತಿಯಾದ ಕಾರಣ ಆಸ್ಪತ್ರೆಗೆ ಸೇರಿಸಿದೆವು. ಆದರೆ ಹಿಟ್ಟಿನಿಂದಲೇ ಈ ಸಮಸ್ಯೆಯಾಗಿದೆ ಎಂದು ತಿಳಿಯದ ಸೊಸೆ, ಅದೇ ಹಿಟ್ಟನ್ನು ಬಳಸಿ ಮಗಳಿಗೂ ದೋಸೆ ನೀಡಿದ್ದಾಳೆ. ನಂತರ ಅವರಿಗೂ ವಾಂತಿಯಾಗಿದೆ, ಎಂದು ವಿವರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.

ಈ ಆರೋಪವನ್ನು ತಳ್ಳಿ ಹಾಕಿರುವ ಅಂಗಡಿ ಮಾಲೀಕ ಕೇತನ್ ಪಟೇಲ್, “ನಾವು ದಿನಕ್ಕೆ 100 ರಿಂದ 125 ಕೆಜಿ ಹಿಟ್ಟು ಮಾರಾಟ ಮಾಡುತ್ತೇವೆ. ಅದೇ ಬ್ಯಾಚ್ ನ ಹಿಟ್ಟನ್ನು ನಮ್ಮ ಸಂಬಂಧಿಕರು ಮತ್ತು ನೂರಾರು ಗ್ರಾಹಕರು ಬಳಸಿದ್ದಾರೆ, ಯಾರಿಗೂ ತೊಂದರೆಯಾಗಿಲ್ಲ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ದಂಪತಿಗಿಂತ ಮೊದಲು 10 ಮಂದಿ ಮತ್ತು ನಂತರ 10 ಮಂದಿ ಅದೇ ಡ್ರಮ್‌ನಿಂದ ಹಿಟ್ಟು ಖರೀದಿಸಿದ್ದಾರೆ. ನಾನು ವೈಯಕ್ತಿಕವಾಗಿ ಅವರನ್ನೆಲ್ಲಾ ವಿಚಾರಿಸಿದ್ದೇನೆ, ಯಾರಿಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ. ಹಿಟ್ಟು ಹಾಳಾಗಿದ್ದರೆ ಕೇವಲ ಒಂದು ಕುಟುಂಬಕ್ಕೆ ಮಾತ್ರ ಸಮಸ್ಯೆ ಆಗುತ್ತಿರಲಿಲ್ಲ. ಎಲ್ಲರಿಗೂ ಸಮಸ್ಯೆಯಾಗಬೇಕಿತ್ತು ಎಂದು ವಾದಿಸಿದ್ದಾರೆ.

ಪೊಲೀಸರು ಮತ್ತು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನ ಆಹಾರ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಮಕ್ಕಳ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇದು ಕೇವಲ ಫುಡ್ ಪಾಯ್ಸನಿಂಗ್ ಅಥವಾ ಆಹಾರದಲ್ಲಿನ ಕಲಬೆರಕೆಯಿಂದಾಗಿದೆಯೇ ಎಂದು ತಿಳಿದುಬರಲಿದೆ.