ಮಂಗಳೂರು: ಕಡೆಕಾರಿನಲ್ಲಿ ಪಾಲೇಮಾರ್ ಸಮೂಹದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಗೆ ಚಾಲನೆ

ಮಂಗಳೂರು: ಮಂಗಳೂರು ಮಹಾನಗರದ ಜಿಪ್ಪು ಕಡೆಕಾರು ಎಂಬಲ್ಲಿ ನೇತ್ರಾವತಿ ನದಿಯ ಕಿನಾರೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವರ ಮತ್ತು ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಗಳ ಆಶೀರ್ವಾದಗಳೊಂದಿಗೆ, ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳಿಗಾಗಿ ನಿರ್ಮಾಣಗೊಂಡಿರುವ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಯ ಚಾಲನಾ ಕಾರ್ಯಕ್ರಮವು ಮೇ 22ರಂದು ಪೂರ್ವಾಹ್ನ ಗುರುವನ ಶ್ರೀ ದುರ್ಗಾ ಕ್ಷೇತ್ರದಲ್ಲಿ ಜರುಗಿತು.

ನೇತ್ರಾವತಿ ಸಭಾಭವನ’, ‘ಪಾಲೇಮಾರ್ ಫಾರ್ಮ್ಸ್’, ‘ಪಾಲೇಮಾರ್ ಕನ್ವೆನ್ಷನ್ ಸೆಂಟರ್’ ಹಾಗೂ ‘ಪಾಲೇಮಾರ್ ಗಾರ್ಡನ್’ ಸಭಾಂಗಣಗಳ ಅಧಿಕೃತ ಲೋಕಾರ್ಪಣೆಯು ಮೇ 23ರಂದು ನಡೆಯಲಿದ್ದು, ಇದರ ಮುನ್ನಾದಿನವಾದ ಶುಕ್ರವಾರದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದ ಮರಕಡ ಶ್ರೀ ಗುರುಪರಾಶಕ್ತಿ ಮಠದ ಮಠಾಧಿಪತಿಗಳಾದ ಪೂಜ್ಯ ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿಯವರು ಆಶೀರ್ವಚನ ನೀಡಿ, “ಈ ಕ್ಷೇತ್ರವು ಸಾಮಾನ್ಯ ಕ್ಷೇತ್ರವಲ್ಲ. ಇದರ ಇತಿಹಾಸ ಕೇವಲ ವರ್ತುಲದೊಳಗೆ ಅಥವಾ ಪುರಾಣಗಳ ಭಾವದೊಳಗೆ ಸೀಮಿತವಾಗಿಲ್ಲ; ಇದು ಸೃಷ್ಟಿಯ ಆದಿಯ ಚಿಂತನೆಯನ್ನು ಸ್ಪರ್ಶಿಸುತ್ತಿದೆ. ಕೃಷ್ಣ ಜೆ. ಪಾಲೇಮಾರ್ ಅವರು ನಿರ್ಮಿಸಿರುವ ಈ ಸಭಾಂಗಣಗಳು ಕೇವಲ ಕಾರ್ಯಕ್ರಮ ನಡೆಸುವ ತಾಣಗಳಲ್ಲ, ಇವು ಇತಿಹಾಸದ ಪುಟಗಳನ್ನು ಎಬ್ಬಿಸುವ ಮತ್ತು ಸೃಷ್ಟಿಯನ್ನು ಉಳಿಸುವ ದೇವೀ ಸಂಕಲ್ಪದ ಆಧ್ಯಾತ್ಮಿಕ ಕೇಂದ್ರದ ಸಂಕೇತಗಳಾಗಿವೆ” ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪೂಜನೀಯ ಮಾತೆ ಶ್ರೀಮತಿ ಶಕುಂತಲಾ ನರೇಂದ್ರನಾಥ ಕೋಟೇಕಾರ್ ಅವರು ಮಾತನಾಡಿ, “1974ರಲ್ಲಿ ಸಂಭವಿಸಿದ ಭೀಕರ ಪ್ರಳಯದ ಸಂದರ್ಭದಲ್ಲಿ ಇಲ್ಲಿನ ಎಲ್ಲಾ ವಸ್ತುಗಳು ಜಲಸಮಾಧಿಯಾಗಿದ್ದರೂ, ಶ್ರೀ ಮಲ್ಲಿಕಾರ್ಜುನ ದೇವರ ವಸ್ತುಗಳಿಗೆ ಏನೂ ಆಗದಿರುವುದು ಅಚ್ಚರಿಯಾಗಿತ್ತು. ಈ ಮಹಾ ಸನ್ನಿಧಾನದಲ್ಲಿ ಮಹತ್ತರವಾದ ದೈವೀ ಶಕ್ತಿ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಪಾಲೇಮಾರ್ ಅವರು ಈ ಸಭಾಭವನಗಳಿಗೆ ಇಲ್ಲಿಂದಲೇ ಚಾಲನೆ ನೀಡುತ್ತಿರುವುದರ ಹಿಂದೆ ಶ್ರೀ ಮಲ್ಲಿಕಾರ್ಜುನನ ಸಂಕಲ್ಪವೇ ಕಾರಣವಾಗಿದೆ. ಮೂಲ ಮನೆ ಮತ್ತು ಕುಟುಂಬದ ಬಗ್ಗೆ ಕೃಷ್ಣ ಜೆ. ಪಾಲೇಮಾರ್ ಅವರಿಗಿರುವ ಚಿಂತನೆ ಶ್ಲಾಘನೀಯ. ಶೂನ್ಯದಿಂದ ಸಾಧಿಸಿದ ಈ ತಾಣವು ಇನ್ನು ಮುಂದೆ ಶುಭ ಕಾರ್ಯಗಳಿಗೆ ಸಾಕ್ಷಿಯಾಗಲಿದೆ” ಎಂದು ಹಾರೈಸಿದರು.

ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡಿ, “ಪೂಜ್ಯ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಗಳ ಆಶೀರ್ವಾದದ ಫಲವಾಗಿ ಈ ಎಲ್ಲಾ ಸತ್ಕಾರ್ಯಗಳು ಸಾಗುತ್ತಿವೆ. ನಾನು ಈ ಸ್ಥಿತಿಗೆ ಬರಲು ಪೂಜ್ಯ ಗುರುಗಳು ಹಾಗೂ ಕೃಷ್ಣ ಜೆ. ಪಾಲೇಮಾರ್ ಅವರೇ ಕಾರಣ. ಪಾಲೇಮಾರ್ ದಂಪತಿಯ ಹೃದಯಶ್ರೀಮಂತಿಕೆ ಅಪಾರವಾದದ್ದು. ಅಷ್ಟು ಐಶ್ವರ್ಯವಿದ್ದರೂ ಅವರು ಇಂದಿಗೂ ಸರಳತೆಯಿಂದ ಬದುಕುತ್ತಿದ್ದಾರೆ. ಇದಕ್ಕೆ ಪೂಜ್ಯ ಗುರುಗಳು ನೀಡಿದ ಸಂಸ್ಕಾರವೇ ಕಾರಣ” ಎಂದು ನುಡಿದರು.

‘ಪಾಲೇಮಾರ್’ ಎಂಬುದು ನನ್ನ ಹೆಸರಲ್ಲ, ಅದು ಪ್ರಕೃತಿಯ ನೆನಪು: ಕೃಷ್ಣ ಜೆ. ಪಾಲೇಮಾರ್
ಸಭಾಂಗಣಗಳ ಯಜಮಾನರಾದ ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ನನ್ನ ಕುಲದೇವರಾದ ಮಲ್ಲಿಕಾರ್ಜುನ ಹಾಗೂ ಆರಾಧ್ಯ ತಾಯಿಯ ಸನ್ನಿಧಾನದಲ್ಲಿ ಈ ನಾಲ್ಕು ಸಭಾಭವನಗಳಿಗೆ ಚಾಲನೆ ಸಿಕ್ಕಿರುವುದು ನನ್ನ ಸೌಭಾಗ್ಯ. ‘ಪಾಲೇಮಾರ್’ ಎಂಬುದು ಕೇವಲ ನನ್ನ ಹೆಸರಲ್ಲ; ಅದು ʻಪಾಲೆ ಮರ’ (ಹಾಲೆ ಮರ). ಈ ಕ್ಷೇತ್ರದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಈ ಹಿಂದೆ ನೂರಾರು ಪಾಲೆ ಮರಗಳಿದ್ದವು. ನನ್ನ ತಂದೆಯವರು ಯಾವುದೇ ಭಯವಿಲ್ಲದೆ ಇಲ್ಲಿ ಸಣ್ಣ ಗುಡಿಸಲು ಕಟ್ಟಿ ಜೀವನ ಆರಂಭಿಸಿದ್ದರು. ನಾನು ವ್ಯಾಪಾರ ರಂಗಕ್ಕೆ ಇಳಿದಾಗ ಪ್ರಕೃತಿಯ ಸಂಕೇತವಾದ ಆ ಮರದ ನೆನಪಿನಲ್ಲೇ ʻಪಾಲೇಮಾರ್’ ಎಂದು ಹೆಸರಿಟ್ಟೆ. ಇಂದಿಗೂ ನಾನು ಎಲ್ಲೇ ಭೂಮಿ ಖರೀದಿಸಿದರೂ ಅಲ್ಲೊಂದು ಪಾಲೆ ಮರ ಇದ್ದೇ ಇರುತ್ತದೆ. ಕಷ್ಟದ ದಿನಗಳಲ್ಲಿ ಜೊತೆಯಾಗಿದ್ದ ಆ ಮರವನ್ನು ನಾನು ಎಂದಿಗೂ ಮರೆಯಲಾರೆ” ಎಂದು ಭಾವೋದ್ವೇಗದಿಂದ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸುಕುಮಾರ್ ಜಪ್ಪು ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ಅತಿಥಿಗಳಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಜೆ.ಕೆ. ರಾವ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ನವನೀತ್ ಶೆಟ್ಟಿ ಕದ್ರಿ ಹಾಗೂ ಕಲ್ಪನಾ ವೆಂಕಟೇಶ್ ಅತ್ಯಂತ ಸುಂದರವಾಗಿ ನಿರೂಪಿಸಿದರು.

error: Content is protected !!